

ಉಡುಪಿ: ತ್ಯಾಜ್ಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಹಸಿತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಪ್ರತೊಯೊಬ್ಬರು ಮುಂದಾಗಬೇಕು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದರು.
ಸೋಮವಾರ ನಗರದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಗರಸಭೆ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಸಹಯೋಗದೊಂದಿಗೆ ನಡೆದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಲ್ಕ್ ವೆಸ್ಟ್ ಸಮರ್ಪಕ ವಿಲೇವಾರಿ ಮಾಹಿತಿ ಕಾರ್ಯಾಗಾರ ಹಾಗೂ ಸಾವಯವ ಗೊಬ್ಬರ ಪರಿವರ್ತನಾ ಯಂತ್ರಗಳ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ೩೫ ರಿಂದ ೪೦ ಟನ್‌ಗಳಷ್ಟು ಹಸಿ ತಾಜ್ಯ ಬರುತ್ತಿದ್ದು, ಕರ್ವಾಲು ಗ್ರಾಮದಲ್ಲಿ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಬೇರೆ ಬೇರೆಯಾಗಿ ವಿಂಗಡಿಸಲಾಗುತ್ತಿದ್ದು, ಹಸಿ ತ್ಯಾಜ್ಯ ಬಹುದೊಡ್ಡ ಸಮಸ್ಯೆಯಾಗಿದೆ. ಉಡುಪಿಯ ದೊಡ್ಡ ದೊಡ್ಡ ಹೋಟೆಲ್‌ಗಳು, ಕಲ್ಯಾಣ ಮಂಟಪಗಳು ತಮ್ಮಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ತಾವೇ ವಿಲೇವಾರಿ ಮಾಡುವಂತದ್ದು ಬಹಳ ಉತ್ತಮ ಅಥವಾ ಅದನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಗೋಬರ್ ಗ್ಯಾಸನ್ನು ತಯಾರಿಸಬಹುದು ಎಂದರು.
ನಗರಸಭೆಯ ಪೌರಾಯುಕ್ತ ಡಾ.ಉದಯ ಶೆಟ್ಟಿ ಮಾತನಾಡಿ, ನಗರಸಭೆಯಲ್ಲಿ ಪ್ರತಿದಿನ ಸುಮಾರು ೭೦ ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತಿದೆ. ಘನ ತ್ಯಾಜ್ಯ ವಿಲೇವಾರಿ ಉಡುಪಿ ನಗರಕ್ಕಷ್ಟೇ ಅಲ್ಲದೇ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ. ಇದರ ಸಮರ್ಪಕ ನಿರ್ವಹಣೆಗೆ ಬೀಡಿನಗುಡ್ಡೆ ಹಾಗೂ ಕರಾವಳಿ ಬೈಪಾಸ್‌ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿದ್ದು, ಇತ್ತೀಚೆಗೆ ಕರ್ವಾಲು ನಲ್ಲಿ ಎಂ.ಆರ್.ಎಫ್ ಘಟಕವನ್ನೂ ಆರಂಭಿಸಲಾಗಿದೆ ಎಂದರು.
ಕಟಪಾಡಿಯ ವಿಜಯ್ ಇಂಡಸ್ಟ್ರೀಯ ವ್ಯವಸ್ಥಾಪಕ ನಿರ್ದೇಶಕ ಸತ್ಯೇಂದ್ರ ಪೈ ಹಸಿತ್ಯಾಜ್ಯದಿಂದ ಸುಲಭವಾಗಿ ಸಿಎನ್‌ಜಿ ಉತ್ಪತ್ತಿ ಮತ್ತು ಸಾವಯವ ಗೊಬ್ಬರ ಮಾಡುವ ವಿಧಾನದ ಬಗ್ಗೆ, ನಗರಸಭೆಯ ಸ್ವಚ್ಛತಾ ರಾಯಭಾರಿ ಜೋಸೆಪ್ ಜಿ.ಎಂ ರೆಬೆಲ್ಲೋ ಮನೆ ಹಂತದಲ್ಲಿ ಕಸ ವಿಂಗಡಣೆ ವಿಧಾನ, ಕಿರ್ಲೋಸ್ಕರ್ ಆಯಿಲ್ ಲಿಮಿಟೆಡ್‌ನ ರಕ್ಷಿತ್, ಗ್ರೀನ್ ರಿಚ್ ಗ್ರೋ ಇಂಡಿಯಾ ಲಿಮಿಟೆಡ್‌ನ ಹರೀಶ್ ಹಸಿ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿಸುವ ಯಂತ್ರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಮಿತ್ರ ಪ್ರಿಯ ನರ್ಸಿಂಗ್ ಹೋಂನ ನಿವೃತ್ತ ಆರೋಗ್ಯ ಅಧಿಕಾರಿ ಡಾ.ಬಿ.ಜಿ.ಕೆ ಆಚಾರ್ಯ, ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಜಯಂತಿ ಉಪಸ್ಥಿತರಿದ್ದರು. ನಗರಸಭೆ ಪರಿಸರ ಅಭಿಯಂತರೆ ಸ್ನೇಹಾ ಕೆ ಎಸ್ ಸ್ವಾಗತಿಸಿ, ಎನ್ ನಾಗರಾಜು ನಿರೂಪಿದರು.