

ಉಡುಪಿ: ನಗರಸಭೆಯ 13ನೇ ಮೂಡುಪೆರಂಪಳ್ಳಿ ವಾರ್ಡಿನ ಸಾಮಾನ್ಯ ಮಹಿಳೆ ಮೀಸಲಾತಿ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿ. 15 ಕೊನೆಯ ದಿನವಾಗಿದ್ದು, ಡಿ. 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿ. 18 ಕೊನೆಯ ದಿನವಾಗಿದ್ದು, ಡಿ. 27 ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ಡಿ. 29 ರಂದು ನಡೆಸಲಾಗುತ್ತದೆ. ಡಿ. 30 ರಂದು ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡುಪೆರಂಪಳ್ಳಿ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸೆಲಿನಾ ಕರ್ಕಡ ಅವರು ಆನಾರೋಗ್ಯದಿಂದ ಕಳೆದ ವರ್ಷ ಅಕ್ಟೋಬರ್ 29ರಂದು ನಿಧನರಾಗಿದ್ದು, ಖಾಲಿ ಉಳಿದಿರುವ ಒಂದು ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ.