

ಉಡುಪಿ ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಎತ್ತರದ ಪ್ರದೇಶಗಳಿಗೆ ಕಳೆದ 10 ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಶುಕ್ರವಾರ ನಗರಸಭೆ ಸಾಮಾನ್ಯ ಸಭೆ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ಟಿ.ಜಿ. ಹೆಗಡೆ ವಿಷಯ ಪ್ರಸ್ತಾಪಿಸಿ, ಕಳೆದ ಎರಡು ಮೂರು ದಿನಗಳಿಂದ ಶಿರಬೀಡುವಾಡಿನಲ್ಲಿ 30 ರಿಂದ 40 ಮನೆಗಳಿಗೆ ಕಡಿಮೆ ನೀರು ಬರುತ್ತಿದೆ. ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಬೈಲೂರು ವಾರ್ಡಿನಲ್ಲಿ ಕನಿಷ್ಠ 10 ಮನೆಗಳಿಗೆ ಒಂದು ವಾರದಿಂದ ನೀರು ಬರುತ್ತಿಲ್ಲ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಮೂರು ತಿಂಗಳ ಮಟ್ಟಿಗೆ ಓರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕಗೊಳಿಸಬೇಕು. ಅವರ ದೂರವಾಣಿ ಸಂಖ್ಯೆಯನ್ನು ಸದಸ್ಯರಿಗೆ ನೀಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಡಾ. ಉದಯ ಶೆಟ್ಟಿ, ಬಜೆ ಡ್ಯಾಮ್ನಲ್ಲಿ ನೀರು ಸಂಗ್ರಹಣೆ 5.9 ಮೀ.ನಿಂದ 6.10ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಜನವರಿ 25ಕ್ಕೆ ಒಳಹರಿವು ನಿಂತಿದ್ದರೂ ಮೇ. 15ರವರೆಗೂ ನೀರು ಸಾಕಾಗಿತ್ತು. ಆದರೆ ಕಳೆದ ಒಂದು ವಾರದಲ್ಲಿ ಬಿಸಿಲಬೆಗೆಗೆ ನೀರು ಅವಿಯಾಗುವುದು ಹೆಚ್ಚುತ್ತಿದೆ. ಹೀಗಾಗಿ ಮೂರು ನಾಲ್ಕು ದಿನಗಳಿಂದ ನೀರು ಸರಬರಾಜಿನಲ್ಲಿ ಸ್ವಲ್ಪ ಕಂಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಎತ್ತರದ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಾಸವಾಗಿದೆ. ಇದನ್ನು ಸರಿಪಡಿಸಲಾಗುವುದು. ನೀರಿನ ಬಗ್ಗೆ ಸಹಾಯಕ ಅಭಿಯಂತರು ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದರು.
ಕೇಬಲ್‌ಗಾಗಿ ರಸ್ತೆ ಅಗೆತ ಸಮಸ್ಯೆ
ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಮೂರು ದಿನದ ಹಿಂದೆ ಪ್ಯಾಚ್ ವರ್ಕ್ ಮಾಡಿದ ರಸ್ತೆಯನ್ನು ಕೇಬಲ್ ಕೆಲಸದವರು ಅಗೆದು ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು. ರಸ್ತೆ ಆಗೆಯುವ ಮುನ್ನ ಆಯಾ ಭಾಗದ ಕೌನ್ಸಿಲರ್ಗಳ ಗಮನಕ್ಕೆ ತರುವಂತೆ ತಿಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಅಭಿಯಂತರ ಯಶ್ವಂತ್ ಪ್ರಭು, ಹಳೆ ಅನುಮತಿ ಮೇಲೆ ಕೆಲವೆಡೆ ರೋಡ್ ಅಗೆದಿದ್ದಾರೆ. ಸದ್ಯಕ್ಕೆ ಯಾರಿಗೂ ಅನುಮತಿ ಕೊಟ್ಟಿಲ್ಲ. ಅಗೆತ ರಸ್ತೆಗಳಿಗೆ ಪ್ಯಾಚ್ ವರ್ಕ್ ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದರು.
20 ಸಾವಿರ ಎಲ್ಇಡಿ ಲೈಟ್
ಶಾಸಕ ರಘುಪತಿ ಭಟ್ ಮಾತನಾಡಿ, ಶಾರದಾ ಕಲ್ಯಾಣ ಮಂಟಪ ರಸ್ತೆಯನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಆರು ಮೀಟರ್ ಅಗಲದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಳೆ ಕಾಂಕ್ರಿಟ್ ರಸ್ತೆ ಹಾಗೂ ಹೊಸ ರಸ್ತೆ ಮಧ್ಯೆ ಲೆವೆಲ್ ಹೊಂದಾಣಿಕೆ ಆಗದ ಕಾರಣ ಹಳೆ ಕಾಂಕ್ರಿಟ್ ರಸ್ತೆ ಅಗೆಯಲಾಗಿದೆ. ನಗರದಲ್ಲಿ ಹಳೆ ಬಲ್ಬುಗಳನ್ನು ತೆಗೆದು ಸುಮಾರು 20 ಸಾವಿರ ಎಲ್ಇಡಿ ಲೈಟ್ ಅಳವಡಿಸುವ ಬಗ್ಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕೆಲಸ ಪ್ರಾರಂಭವಾಗಲಿದೆ. ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ, ಗುಂಡಿಬೈಲು ಅಂಬಾಗಿಲು ರಸ್ತೆಯಲ್ಲಿಯೂ ಬೀದಿ ದೀಪ ಅಳವಡಿಸಲಾಗುವುದು ಎಂದರು. ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ ಉಪಸ್ಥಿತರಿದ್ದರು.