

ಉಡುಪಿ: ಅಜ್ಜರಕಾಡು ಪಾರ್ಕ್ ಬಳಿ ವಸತಿ ಕಟ್ಟಡದಲ್ಲಿ ಪ್ರಾರ್ಥನಾ ಮಂದಿರ ಕಾರ್ಯಾಚರಿಸುತ್ತಿದ್ದು, ಮತಾಂತರ ಕಾರ್ಯ ನಡೆಯುತ್ತಿದೆ ಎಂಬ ಆರೋಪವಿದೆ. ಆವರಣಗೋಡೆಯಲ್ಲಿ ಪ್ರಚೋದನಕಾರಿ ಬರಹಗಳನ್ನು ಬರೆಯಲಾಗಿದೆ. ಕೂಡಲೇ ಈ ಬರಹಗಳನ್ನು ಅಳಿಸಿ ಹಾಕುವಂತೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ವಿಜಯ್ ಕೊಡವೂರು, ಮನೆಯನ್ನೇ ಪ್ರಾರ್ಥನಾ ಮಂದಿರವಾಗಿ ಮಾರ್ಪಾಡುಗೊಳಿಸಿ ಕಟ್ಟಡದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ಅನುಮಾನವಿದೆ. ನನ್ನ ವಾರ್ಡ್ನ ವ್ಯಕ್ತಿಯೊಬ್ಬರನ್ನು ಮತಾಂತರವಾಗಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ನಗರಸಭೆಯ ಕಡತಗಳಲ್ಲಿ ಈ ಕಟ್ಟಡಕ್ಕೆ ಯಾವ ಪರವಾನಿಗೆ ಇದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ ಸಂತೋಷ್, 1,126 ಚದರ ಅಡಿಯ ವಸತಿಗೃಹಕ್ಕೆ ಅನುಮತಿ ನೀಡಲಾಗಿದೆ. ಸದಸ್ಯರ ದೂರಿನ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಕಟ್ಟಡ 4,000 ಚ.ಅಡಿ ವಿಸ್ತೀರ್ಣ ಹೊಂದಿರುವುದು ಪತ್ತೆಯಾಗಿದೆ. ಈ ಬಗ್ಗೆ ಕಟ್ಟಡ ಮಾಲೀಕರ ಬಳಿ ದಾಖಲೆ ಹಾಜರುಪಡಿಸುವಂತೆ ಸೂಚಿಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆಯ ದಾಖಲೆ ಪ್ರಕಾರ ಕ್ರಮ ಕೈಗೊಳ್ಳಬೇಕು. ಮನೆಗಳಲ್ಲಿ ಮತಾಂತರ ಕೇಂದ್ರಕ್ಕೆ ಅವಕಾಶವಿಲ್ಲ ಎಂದರು.
ಮತಾಂತರ ಕೇಂದ್ರ ತೆರವಿಗೆ ಕಾಂಗ್ರೆಸ್ ವಿರೋಧ
ವಿಪಕ್ಷ ನಾಯಕ ರಮೇಶ್ ಕಾಂಚನ್ ಪ್ರತಿಕ್ರಿಯಿಸಿ, ಪ್ರಾರ್ಥನಾ ಮಂದಿರ ವಿಷಯದಲ್ಲಿ ಅನಗತ್ಯವಾಗಿ ಗೊಂದಲಕ್ಕೆ ಎಡೆಮಾಡಿ ಕೊಡಬೇಡಿ. ನಗರಸಭಾ ವ್ಯಾಪ್ತಿಯಲ್ಲಿ ಇಂತಹ ಅನೇಕ ಕಟ್ಟಡಗಳಿವೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ಶಾಸಕರು, ಅನಧಿಕೃತ ಕಟ್ಟಡಗಳ ಬಗ್ಗೆ ಮಾಹಿತಿ ಇರುವವರು ಮುಂದಿನ ಸಭೆಯಲ್ಲಿ ವಿವರವನ್ನು ನೀಡಬಹುದು. ಓಟು ಬ್ಯಾಂಕಿಗಾಗಿ ಇಂತಹ ಕೇಂದ್ರಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಯಾವುದೇ ಮತಾಂತರ ಕೇಂದ್ರಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ರ್ನಿಣಯ ಕೈಗೊಳ್ಳಲಾಗುವುದು ಎಂದರು.
ಬೆಳೆಯುತ್ತಿರುವ ಉಡುಪಿ ನಗರದಲ್ಲಿ ಪ್ರತಿದಿನ ವಾಹನಗಳ ಸಂಖ್ಯೆ ಏರುತ್ತಿದೆ. ಈಗಾಗಲೇ ನಗರದ ಪ್ರಮುಖ ರಸ್ತೆಯಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಗಳು ಅವೈಜ್ಞಾನಿಕವಾಗಿದ್ದು, ಜಾಹಿರಾತು ಆಧರಿತವಾಗಿ ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸುವಂತೆ ರ್ನಿಣಯಿಸಲಾಗಿದೆ. ನೈಜ ಸಿಗ್ನಲ್ ಕಂಬಗಳ ನಕಾಶೆಯನ್ನು ತಯಾರಿಸಿ ನೀಡಲು ಡಿವೈಎಸ್ಪಿಯವರಿಗೆ ಸೂಚನೆ ನೀಡಲಾಗಿದೆ ಎಂದು ಸದಸ್ಯರಿಗೆ ತಿಳಿಸಿದರು.
ಕಲ್ಸಂಕದಲ್ಲಿ ಟ್ರಾಫಿಕ್ ಸಿಗ್ನಲ್ ಯಾಕಿಲ್ಲ
ಸದಸ್ಯ ವಿಜಯ ಕೊಡವೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದ ವಿವಿಧೆಡೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಕಲ್ಸಂಕ, ತ್ರಿವೇಣಿ ಸರ್ಕಲ್ ಸೇರಿದಂತೆ ಕೆಲವೆಡೆ ಬೃಹತ್ ಕಂಬಗಳನ್ನು ನಿಲ್ಲಿಸಲಾಗಿದೆ. ಆದರೆ ಸಿಗ್ನಲ್ ಲೈಟ್ ಅಳವಡಿಸಲಾಗಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
15 ಲಕ್ಷ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್
ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯಿಸಿ, ಕಲ್ಸಂಕ&ಗುಂಡಿಬೈಲು ಮಾರ್ಗಕ್ಕೆ ಫ್ರೀ ಲೆಫ್ಟ್ ಮಾಡಲು ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕಲ್ಸಂಕ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯಕ್ಕೆ ನಗರದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಲು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ. ಈಗಾಗಲೇ ಅಳವಡಿಸಿರುವ ಬೃಹತ್ ಕಂಬಗಳನ್ನು ತೆರವುಗೊಳಿಸಲಾಗುವುದು. ಕಿನ್ನಿಮೂಲ್ಕಿಯಿಂದ ಕೊರಂಗ್ರಪಾಡಿವರೆಗೆ ಹಾಗೂ ಕರಾವಳಿ ಜಂಕ್ಷನ್ನಿಂದ ಸಂತೆಕಟ್ಟೆವರೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಮುಖ್ಯಾಧಿಕಾರಿ ಉದಯ್ ಕುಮಾರ್ ಶೆಟ್ಟಿ , ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.