ಉಡುಪಿ ನಗರಸಭೆಯಲ್ಲಿ 2.69 ಕೋಟಿ ರೂ. ಮಿಗತೆ ಬಜೆಟ್ ಮಂಡನೆ

udp-27-cmc
Published on

ಉಡುಪಿ: ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ 2.69 ಕೋಟಿ ರೂ. ಮಿಗತೆ ಬಜೆಟ್ ಮಂಡಿಸಿದರು. ಆರಂಭಿಕ ಮೊತ್ತ 93.23 ಕೋಟಿ ರೂ. ಹಾಗೂ 87.22 ಕೋಟಿ ರೂ. ಸ್ವಿಕೃತಿ ಸೇರಿ ಒಟ್ಟು 180.45 ಕೋಟಿ ರೂ. ಆದಾಯ ಅಂದಾಜಿಸಲಾಗಿದ್ದು, 177.75 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ 155 ಕೋಟಿ ರೂ. ಇದ್ದ ಬಜೆಟ್ ಗಾತ್ರ ಈ ಬಾರಿ 180 ಕೋಟಿ ರೂ.ಗೆ ಏರಿಕೆಯಾಗಿದೆ.

ಆದಾಯ ಮೂಲ
15ನೇ ಕೇಂದ್ರ ಹಣಕಾಸು ಆಯೋಗದಿಂದ 5.43 ಕೋಟಿ ರೂ., ರಾಜ್ಯ ಹಣಕಾಸು ಆಯೋಗದಿಂದ 2.64 ಕೊಟಿ ರೂ., ಸಿಬ್ಬಂದಿ ವೇತನ ಅನುದಾನ 6.20 ಕೋಟಿ ರೂ., ವಿದ್ಯುತ್ ಬಿಲ್ಲು ಅನುದಾನ 7.42 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 3.74 ಕೋಟಿ ರೂ., ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ 3.91 ಕೋಟಿ ರೂ., ಗೃಹಭಾಗ್ಯ ಯೋಜನೆಯಲ್ಲಿ 8 ಲಕ್ಷ ರೂ., ತ್ಯಾಜ್ಯ ನಿರ್ವಹಣೆ ಅನುದಾನ 3 ಕೋಟಿ ರೂ., ಶಾಸಕ, ಸಂಸದರ ಅನುದಾನ 35 ಲಕ್ಷ ರೂ., ಆಸ್ತಿ ತೆರಿಗೆಯಿಂದ 18.20 ಕೋಟಿ ರೂ., ಉದ್ದಿಮೆ ಪರವಾನಿಗೆಯಿಂದ 90 ಲಕ್ಷ ರೂ., ಜಾಹಿರಾತು ಶುಲ್ಕ 20 ಲಕ್ಷ ರೂ., ಕಟ್ಟಡ ಪರವಾನಿಗೆ 40 ಲಕ್ಷ ರೂ., ನೀರು ಸರಬರಾಜು ಶುಲ್ಕ 15 ಕೋಟಿ ರೂ., ನಗರಸಭೆ ವಾಣಿಜ್ಯ ಸಂಕಿರ್ಣ ಬಾಡಿಗೆ ಶುಲ್ಕ 2 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ವೆಚ್ಚಗಳ ಅಂದಾಜು ಪಟ್ಟಿ
ಕಚೇರಿ ಆಡಳಿತಾತ್ಮಕ ವೆಚ್ಚಗಳಿಗೆ ರೂ. 1.93 ಕೋಟಿ ರೂ., ಲೋಕೋಪಯೋಗಿ ಕಾಮಗಾರಿಗಳು, ಮುಖ್ಯ ರಸ್ತೆಗಳ ಡಾಮರೀಕರಣ, ಕಾಂಕ್ರಿಟೀಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ ಕಾಮಗಾರಿಗಾಗಿ ರೂ.23 ಕೋಟಿ ರೂ. ನಿಗದಿಪಡಿಸಲಾಗಿದೆ. ದಾರಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 4.33 ಕೋಟಿ ರೂ., ಕುಡಿಯುವ ನೀರು ಸರಬರಾಜು ಪೈಪುಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 9.74 ಕೋಟಿ ರೂ., ಹೊಸ ಪೈಪ್‌ಲೈನ್ ಹಾಗೂ ನೀರು ವಿತರಣಾ ವ್ಯವಸ್ಥೆಗಾಗಿ 97 ಲಕ್ಷ ರೂ. ಮೀಸಲಿಡಲಾಗಿದೆ.

ಘನತ್ಯಾಜ್ಯ ನಿರ್ವಹಣೆಗೆ 24 ಕೋಟಿ ರೂ.
ನಗರಸಭಾ ವ್ಯಾಪ್ತಿಯ ಬೀದಿ ಗುಡಿಸುವ ಮತ್ತು ತ್ಯಾಜ್ಯ ಸಾಗಾಟಕ್ಕೆ ರೂ. 10 ಕೋಟಿ ರೂ., ಮೂಲ ಸೌಕರ್ಯಗಳ ವ್ಯವಸ್ಥೆಗಾಗಿ 14.08 ಕೋಟಿ ರೂ. ಮೀಸಲಿರಿಸಲಾಗಿದೆ. ನಗರಸಭಾ ವ್ಯಾಪ್ತಿಯ ಒಳಚರಂಡಿ ಮತ್ತು ಎಸ್.ಟಿ.ಪಿಗಳ ನಿರ್ವಹಣೆಗಾಗಿ ರೂ. 4.62 ಕೋಟಿ, ಒಳಚರಂಡಿ ಜಾಲ ಅಭಿವೃದ್ಧಿಗೆ ಮತ್ತು ಕೊಳಚೆ ನೀರು ಶುದ್ದೀಕರಣ ಘಟಕದ ವೆಚ್ಚಗಳಿಗೆ ರೂ. 5 ಕೋಟಿ ಕಾದಿರಿಸಲಾಗಿದೆ. ಉದ್ಯಾನವನಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ರೂ.55 ಲಕ್ಷ, ಹೊಸ ಉದ್ಯಾನವನಗಳಿಗಾಗಿ ರೂ. 2.16 ಕೋಟಿ, ಸ್ಮಶಾನಗಳ ಅಭಿವೃದ್ಧಿಗಾಗಿ 10 ಲಕ್ಷ ರೂ. ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ನಗರಸಭಾ ನಿಧಿಯಿಂದ ರೂ. 96.40 ಲಕ್ಷ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿಯಿಂದ ರೂ. 63 ಲಕ್ಷ ರೂ. ಕಾದಿರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡವರ ಕಲ್ಯಾಣಕ್ಕಾಗಿ ನಗರಸಭಾ ನಿಧಿಯಿಂದ ರೂ. 29 ಲಕ್ಷ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿಯಿಂದ ರೂ. 14.57 ಲಕ್ಷ , ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆಯಿಂದ ಬಳಲುತ್ತಿರುವವರ ಸ್ವಾವಲಂಬನೆ ಮತ್ತು ಪೋಷಣೆಗಾಗಿ ನಗರಸಭಾ ನಿಧಿಯಿಂದ ರೂ. 20 ಲಕ್ಷ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿಯಿಂದ 13.2 ಲಕ್ಷ ರೂ. ಕಾದಿರಿಸಲಾಗಿದೆ.
ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಕ್ರೀಡಾ ಇಲಾಖೆಗೆ ರೂ. 4 ಲಕ್ಷ, ಮಳೆನೀರು ಹರಿಯುವ ತೋಡುಗಳು, ತಡೆಗೋಡೆ, ಸಣ್ಣ ಸೇತುವೆಗಳ (ಕಾಲು ಸಂಕ) ನಿರ್ಮಾಣ ಹಾಗೂ ದುರಸ್ಥಿಗಳಿಗಾಗಿ ರೂ. 2.20 ಕೋಟಿ, ಒಳಚರಂಡಿ ಜಾಲ ವಿಸ್ತರಣೆ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 5 ಕೋಟಿ ರೂ. ಮೀಸಲಿಡಲಾಗಿದೆ. ಸಭೆಯಲ್ಲಿ ಶಾಸಕ ರಘುಪತಿ ಭಟ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net