ಉಡುಪಿ ನಗರದ ಸಿ.ಸಿ. ಟಿವಿ ದುರಸ್ತಿಗೆ ಆಗ್ರಹ

20230609_121420
Published on

ಉಡುಪಿ: ದೇವಾಲಯಗಳು ಹಾಗೂ ವಿದ್ಯಾಭ್ಯಾಸಕ್ಕಾಗಿ ಉಡುಪಿ ಜಿಲ್ಲೆ ಪ್ರಖ್ಯಾತಿ ಹೊಂದಿರುವುದರಿಂದ ಸಾವಿರಾರು ಜನರು ಪ್ರತಿನಿತ್ಯ ದೇಶ ವಿದೇಶಗಳಿಂದ ಬರುತ್ತಾರೆ. ಆದರೆ ನಗರದ ಸುರಕ್ಷತೆ ದೃಷ್ಟಿಯಿಂದ  ನಗರದ್ಯಾಂತ ಅಳವಡಿಸಿರುವ ಸಿ.ಸಿ.ಟಿವಿಗಳು ಕಳೆದ 1.5 ವರ್ಷದಿಂದ ಕಟ್ಟುಹೋಗಿದ್ದು, ಜಿಲ್ಲಾಡಳಿತ ಹಾಗೂ ನಗರಸಭೆ ಈ ಬಗ್ಗೆ ಕೂಡಲೇ ಗಮನಹರಿಸಿ ದುರಸ್ತಿಗೊಳಿಸಬೇಕು. ಅಗತ್ಯವಿರುವ ಕಡೆ ಹೆಚ್ಚುವರಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


 ಉಡುಪಿ ಜಿಲ್ಲೆ ತುಂಬಾ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕೋಮು ಗಲಭೆ, ಕಳ್ಳತನ, ದರೋಡೆ, ಆಮಲು ಪದಾರ್ಥ, ಸರಗಳ್ಳತನ, ಮೊಬೈಲ್ ಕಳ್ಳತನ ಮೊದಲಾದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಮತ್ತು ಪ್ರಕರಣ ತ್ವರಿತವಾಗಿ ಬಗೆಹರಿಸಲು ಸಿಸಿ ಟಿವಿ ಫುಟೇಜ್ ಪ್ರಮುಖ ಪ್ರಾತವಹಿಸುತ್ತದೆ. ಇದರ ಕೊರತೆಯಿಂದ ತನಿಖೆಯಲ್ಲಿ ಪೋಲಿಸರಿಗೆ ತುಂಬಾ ಹಿನ್ನಡೆ ಹಾಗೂ ಸಮಸ್ಯೆ ಬಗೆಹರಿಸಲು ತುಂಬಾ ವಿಳಂಬವಾಗುತ್ತಿದೆ. ಸಮಾಜ ಘಾತುಕ ಶಕ್ತಿಗಳು ಇದರ ದುರುಪಯೋಗ ಪಡೆಯುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗಿದೆ. ನಿಟ್ಟೂರು, ಕಲ್ಯಾಣಪುರ, ಮಣಿಪಾಲ, ಕಿನ್ನಿಮೂಲ್ಕಿ, ಇಂದ್ರಾಳಿ, ಸಿಟಿಬಸ್‌ನಿಲ್ದಾಣ, ಕರಾವಳಿ ಜಂಕ್ಷನ್ ಮೊದಲಾದ ಕಡೆ 20ಕ್ಕೂ ಅಧಿಕ ಸಿಸಿಟಿವಿಗಳಿವೆ. ಇದರ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗೆ ಕೊಡಲಾಗಿದ್ದು, ಯಾವುದೂ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಹೀಗಾಗಿ ಸಿ.ಸಿ.ಟಿ.ವಿ ನಿರ್ವಹಣೆ ಮತ್ತು ನಿಯಂತ್ರಣ ಪೋಲಿಸ್ ಇಲಾಖೆ ಸುಪರ್ದಿಗೆ ವಹಿಸಬೇಕು ಎಂದು ಒತ್ತಾಯಿಸಿದರು.


 ಮುಖಂಡರಾದ ಯತೀಶ್ ಕರ್ಕೆರಾ, ಸದಾಶಿವ ಕಟ್ಟೆಗುಡ್ಡೆ, ಅಬುಬಕ್ಕರ್ ಖಾಸಿಂ, ಪ್ರದೀಪ್ ಸ್ಯಾಮುವೆಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net