

ಉಡುಪಿ: ಮೋದಿಯವರು 3ನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಅಂತಾರಾಷ್ಟ್ರೀಯಮಟ್ಟದಲ್ಲಿ ಮತ್ತು ದೇಶದೊಳಗೆ ಭಾರೀ ಷಡ್ಯಂತ್ರ ನಡೆಯುತ್ತಿದೆ. ದೇಶವಿರೋಧಿಗಳು ಮತ್ತೆ ಸಕ್ರಿಯರಾಗಿದ್ದಾರೆ. ರೈತರ ಹೆಸರಿನಲ್ಲಿ ಚಳುವಳಿ ಪ್ರಾರಂಭಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆ ಪಕ್ಷಕ್ಕೆ ಸವಾಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಗುರುವಾರ ಕಡಿಯಾಳಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾರ್ಚ್ 3ರೊಳಗೆ ಚುನಾವಣೆ ಘೋಷಣೆ ಸಾಧ್ಯತೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳಲು ಪಕ್ಷ ನಿರ್ಧರಿಸಿದೆ. 2004 ರಿಂದ 2014ರವರೆಗೆ ಲೋಕಸಭಾ ವ್ಯಾಪ್ತಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. 2014 ರಿಂದ 2024ರ ಅವಧಿಯಲ್ಲಿ ನಡೆದ ಅಭಿವೃದ್ಧಿಗಳನ್ನು ತುಲನೆ ಮಾಡಬೇಕು. ಜಿಲ್ಲೆಯಲ್ಲಿ ಅನೇಕ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮಲ್ಪೆ ಬಂದರಿಗೆ ಪೂರಕವಾಗಿ ಹೆಜಮಾಡಿಯಲ್ಲಿ ಬಂದರು ನಿರ್ಮಾಣಗೊಳ್ಳುತ್ತಿದೆ. ಇಂದ್ರಾಳಿ ರೈಲ್ವೇ ನಿಲ್ದಾಣವನ್ನು ಅಮೃತ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಎಸ್ಐ ಆಸ್ಪತ್ರೆ ಮಂಜೂರಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಕಾರ್ಯಕರ್ತರು ಹಿಂಜರಿಯುವ ಅಗತ್ಯವಿಲ್ಲ. ಕೇಂದ್ರದ ಯೋಜನೆಗಳನ್ನು ಹಂತಹಂತವಾಗಿ ಉಡುಪಿ&ಚಿಕ್ಕಮಗಳೂರಿಗೆ ತರುವ ಪ್ರಯತ್ನ ಮಾಡಿದ್ದೇನೆ ಎಂದರು.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಭಾರಿ ಅರಗ ಜ್ಞಾನೇಂದ್ರ ಮಾತನಾಡಿ, ಕರಾವಳಿ ಕಾರ್ಯಕರ್ತರ ಸತ್ವ ಮತ್ತು ಶಕ್ತಿ ಬಗ್ಗೆ ಪಕ್ಷಕ್ಕೆ ಅರಿವಿದೆ. ಸಿದ್ಧಾಂತಕ್ಕಾಗಿ ಜೀವನ ನಡೆಸುತ್ತಿದ್ದಾರೆ. ಮೊದಿಯವರು ಈಗಾಗಲೇ ಎಲ್ಲಾ ಮನೆಗಳನ್ನು ತಲುಪಿದ್ದಾರೆ. ಕಾರ್ಯಕರ್ತರು ಪ್ರತಿ ಬೂತ್ ನಲ್ಲಿ ಶೇ.10ರಷ್ಟು ಮತ ಜಾಸ್ತಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿ, ಉಡುಪಿ&ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಕೇಂದ್ರ ಕಾರ್ಯಾಲಯ ಉಡುಪಿಯಲ್ಲೇ ಕಾರ್ಯನಿರ್ವಹಿಸಲಿದೆ. ಕೇಂದ್ರ ಸಮಿತಿ ಚುನಾವಣೆಗೆ ಈಗಾಗಲೇ 4 ನಿರ್ದೆಶನಗಳನ್ನು ನೀಡಿದ್ದು, 2024 ಮೋದಿ ಮತ್ತೊಮ್ಮೆ ಗೋಡೆ ಬರಹ, ಶಕ್ತಿ ವಂದನಾ ಅಭಿಯಾನ ಮೂಲಕ ಮಹಿಳಾ ಲಾನುಭವಿಗಳ ಸಂಪರ್ಕ, ಗ್ರಾಮ ಚಲೋ ಮೂಲಕ ಕಾರ್ಯಕರ್ತರಿಂದ ಗ್ರಾಮವಾಸ್ತವ್ಯ, ಲಾಭಾರ್ಥಿ ಸಂಪರ್ಕ ಮೂಲಕ ಕೇಂದ್ರದ ವಿವಿಧ ಯೋಜನೆಗಳ ಲಾನುಭವಿಗಳನ್ನು ಸಂಪರ್ಕಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಜಿ.ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ, ರೇಷ್ಮಾ ಉದಯ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
ಉಡುಪಿ&ಚಿಕ್ಕಮಗಳೂರು ಕ್ಷೇತ್ರದ ಸಂಚಾಲಕ ನವೀನ್ ಶೆಟ್ಟಿ ಕುತ್ಯಾರು ಸ್ವಾಗತಿಸಿ, ಜಿ.ಪ್ರ.ಕಾರ್ಯದರ್ಶಿ ರಾಘವೇಂದ್ರ ಕಿಣಿ ನಿರೂಪಿಸಿದರು.