

ಉಡುಪಿ: ಬಿಷಪ್ ಜೆರಾಲ್ಡ್ ಅವರ ಜೀವನ ಇಡೀ ಸಮಾಜಕ್ಕೆ ಮಾದರಿ. ಅವರು ಆಧ್ಯಾತ್ಮಿಕ ಜೀವನದ ಮೂಲಕ ತನ್ನ ಪ್ರಜೆಗಳಿಗೆ ಯೇಸು ಕ್ರಿಸ್ತರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದ್ದಾರೆ. ಸೇವಾ ಮನೋಭಾವದ ಕಾರ್ಯವೈಖರಿಯಿಂದಾಗಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಯೋಜನೆಯನ್ನು ಜಾರಿಗೆಗೊಳಿಸಿರುವುದು ದೇಶದ ಇತರ ಧರ್ಮಪ್ರಾಂತ್ಯಗಳಿಗೂ ಮಾದರಿಯಾಗಿದೆ ಎಂದು ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಡಾ. ಲಿಯೊಪೊಲ್ಡೊ ಗಿರೆಲ್ಲಿ ಹೇಳಿದರು.
ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಮೈದಾನದಲ್ಲಿ ನಡೆದ ಉಡುಪಿ ಕಥೊಲಿಕ ಧರ್ಮಪ್ರಾಂತ್ಯ ಧಮಾರ್ಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ 75ನೇ ಹುಟ್ಟುಹಬ್ಬ ಹಾಗೂ ಧಮಾರ್ಧ್ಯಕ್ಷ ದೀಕ್ಷೆಯ 25 ವರ್ಷದ ಬೆಳ್ಳಿ ಹಬ್ಬದ ಮಹೋತ್ಸವದಲ್ಲಿ ಅಶೀರ್ವಚನ ನೀಡಿದರು.
ಉಡುಪಿ ಜಿಲ್ಲೆ ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದು ಮೊದಲ ಬಾರಿಗೆ ಆಗಮಿಸಿದಾಗ ವಾತಾವರಣ ನನಗೆ ಅತೀವ ಸಂತಸ ತಂದಿತು. ಉಡುಪಿಯ ಧರ್ಮಪ್ರಾಂತ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವೆಯ ಮೂಲಕ ಎಲ್ಲಾ ಸಮುದಾಯದ ಜನರನ್ನು ಆಕರ್ಷಿಸುವ ಕೆಲಸ ಮಾಡಿರುವುದು ಅಭಿನಂದಾನರ್ಹ ಸಂಗತಿಯಾಗಿದೆ. ಜುಬಿಲಿ ವರ್ಷದಲ್ಲಿ ಕೆಸ್ತ ಬಾಂಧವರಿದ್ದು ಪ್ರತಿಯೊಬ್ಬರು ಭರವಸೆಯ ಯಾತ್ರಿಕರಾಗಿ ಯೇಸುವಿನ ನೈಜ ಶಿಷ್ಯರಾಗಿ ಬದುಕೋಣ ಎಂದರು.
ಶಿವಮೊಗ್ಗ ಧಮಾರ್ಧ್ಯಕ್ಷ ಡಾ. ಪ್ರಾನ್ಸಿಸ್ ಸೆರಾವೊ ಮಾತನಾಡಿ, ಜೆರಾಲ್ಡ್ ಅವರು ಯೇಸು ಸ್ವಾಮಿ ತೋರಿದ ದಾರಿಯಲ್ಲಿ ತಾನು ಸಾಗುವುದರೊಂದಿಗೆ ತನ್ನ ಧರ್ಮಪ್ರಾಂತ್ಯವನ್ನು ಮುನ್ನಡೆಸಿದ್ದಾರೆ. 25 ವರ್ಷ ಸುಧೀರ್ಘ ಧಮಾರ್ಧ್ಯಕ್ಷರಾಗಿ ಮಾತ್ರ ಉಳಿಯದೆ ಒರ್ವ ಒಳ್ಳೆಯ ಗುರುವಾಗಿ ತನ್ನ ಸೇವೆಯನ್ನು ಧರ್ಮಪ್ರಾಂತ್ಯದಲ್ಲಿ ನೀಡುವುದರೊಂದಿಗೆ ಸರ್ವರಿಗೂ ಮಾದರಿಯಾಗಿದ್ದಾರೆ ಎಂದರು.
ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಅಭಿನಂದನಾ ಭಾಷಣ ಮಾಡಿ, ಜೆರಾಲ್ಡ್ ಅವರು ಒರ್ವ ಜನ ಸ್ನೇಹಿ ಧರ್ಮಗುರುವಾಗಿದ್ದು, ಜನರ ಅಗತ್ಯತೆಗಳನ್ನು ತಿಳಿದು ಅದನ್ನು ಜಾರಿಗೆ ಮಾಡುವ ಉನ್ನತ ಗುಣವನ್ನು ಹೊಂದಿದ್ದಾರೆ. ಜೆರಾಲ್ಡ್ ಅವರು ಸಂಘಟನಾ ಚತುರರಾಗಿದ್ದು ಯಾವುದೇ ಕಾರ್ಯಕ್ರಮವನ್ನು ಮಾಡುವುದಿದ್ದರೆ ಅದನ್ನು ಶಿಸ್ತುಬದ್ಧವಾಗಿ ಮಾಡುವ ಉನ್ನತ ಕಲೆಯುನ್ನು ಹೊಂದಿರುವುದು ಅವರ ವಿಶೇಷಗುಣವಾಗಿದೆ. ಅವರ ಸಂಘಟನಾತ್ಮಕ ಹಾಗೂ ಶಿಸ್ತು ಬದ್ಧ ಕಾರ್ಯವೈಖರಿ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಡಾ. ಲಿಯೊಪೊಲ್ಡೊ ಗಿರೆಲ್ಲಿ ಅವರನ್ನು ಧಮಾರ್ಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಸನ್ಮಾನಿಸಿದರು. ಧರ್ಮಪ್ರಾಂತ್ಯದ ಎಲ್ಲಾ ಆಯೋಗಗಳ ವತಿಯಿಂದ ಧಮಾರ್ಧ್ಯಕ್ಷ ಜೆರಾಲ್ಡ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಜೆರಾಲ್ಡ್ ಐಸಾಕ್ ಲೋಬೊ ಅವರು ಎಲ್ಲಾ ಧಮಾರ್ಧ್ಯಕ್ಷರು, ಧರ್ಮಗುರುಗಳು ಹಾಗೂ ಭಕ್ತಾದಿಗಳೊಂದಿಗೆ ಕೃತಜ್ಞತಾ ಬಲಿಪೂಜೆ ನೆರವೇರಿಸಿದರು. ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ.ರ್ಬನಾಡ್ ಮೊರಾಸ್, ಆಗ್ರಾ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಆಲ್ಬರ್ಟ್ ಡಿಸೋಜಾ, ಭದ್ರಾವತಿ ಬಿಷಪ್ ಜೊಸೇಫ್ ಅರುಮಚಾಡತ್, ಬೆಳಗಾವಿ ಧಮಾರ್ಧ್ಯಕ್ಷ ಡೆರಿಕ್ ಫೆರ್ನಾಂಡಿಸ್, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜಾ, ಬೆಳ್ತಂಗಡಿ ಬಿಷಪ್ ಲೊರೆನ್ಸ್ ಮುಕ್ಕುಝಿ, ಚಿಕ್ಕಮಗಳೂರು ಬಿಷಪ್ ತೋಮಸಪ್ಪ ಅಂತೋನಿ ಸ್ವಾಮಿ, ಗುಲ್ಬರ್ಗಾ ಬಿಷಪ್ ರೊರ್ಬಟ್ ಎಂ. ಮಿರಾಂದಾ, ಕಾರವಾರ ಬಿಷಪ್ ದುಮಿಂಗ್ ಡಯಾಸ್, ಮಂಗಳೂರಿನ ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ, ಪುತ್ತೂರು ಬಿಷಪ್ ಗೀವರ್ಗಿಸ್ ಮಾರ್ ಮಕಾರಿಯೋಸ್ ಕಲಾಯಿಲ್, ಶಿವಮೊಗ್ಗ ಬಿಷಪ್ ಪ್ರಾನ್ಸಿಸ್ ಸೆರಾವೊ, ಲಕ್ನೊ ಬಿಷಪ್ ಜೆರಾಲ್ಡ್ ಜೋನ್ ಮಥಾಯಸ್, ಬರಾಯಿಪುರ್ ನಿವೃತ್ತ ಬಿಷಪ್ ಾಲ್ವದೊರ್ ಲೋಬೊ, ಅಲಹಾಬಾದ್ ಬಿಷಪ್ ಲೂಯಿಸ್ ಮಸ್ಕರೇನ್ಹಸ್, ಬೆಂಗಳೂರಿನ ಸಹಾಯಕ ಧಮಾರ್ಧ್ಯಕ್ಷ ಜೊಸೇಫ್ ಸುಶಿನಾಥನ್, ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಆಲ್ಫ್ರೇಡ್ ಮೆಂಡೊನ್ಸಾ, ಮಂಗಳೂರಿನ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಮ್ಯಾಕ್ಷಿಮ್ ನೊರೊನ್ಹಾ, ಕುಲಪತಿ ರೋಶನ್ ಡಿಸೋಜಾ, ಜೊರ್ಜ್ ವಿಕ್ಟರ್ ಡಿಸೋಜಾ, ಉಡುಪಿ ಧರ್ಮ ಪ್ರಾಂತ್ಯದ ಸಲಹೆಗಾರರಾದ ಚಾರ್ಲ್ಸ್ ಮಿನೇಜಸ್, ಆಲ್ಬನ್ ಡಿಸೋಜಾ, ರೆಜಿನಾಲ್ಡ್ ಪಿಂಟೊ, ಜೋರ್ಜ್ ಡಿಸೋಜಾ, ಡಾ. ಲೆಸ್ಲಿ ಡಿಸೋಜಾ, ಅನಿಲ್ ಡಿಸೋಜಾ, ಪಾವ್ಲ್ ರೇಗೊ, ಡೆನಿಸ್ ಡೆಸಾ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ ಪಾಲನಾ ಮಂಡಳಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ವಂದಿಸಿದರು. ಹಣಕಾಸು ಸಮಿತಿ ಸದಸ್ಯ ಪ್ರಿತೇಶ್ ಡೆಸಾ ಹಾಗೂ ಜೆನಿಶಾ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು.