

ಉಡುಪಿ: ಬ್ರಹ್ಮಾವರ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ.12 ರಂದು ಸಂಭವಿಸಿದ ವಿಶಾಲಾ ಗಾಣಿಗ ಅನುಮಾನಾಸ್ಪಾದ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಪೊಲೀಸರು ನಾಲ್ಕು ತಂಡ ರಚಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹೊರ ರಾಜ್ಯದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಫೋನ್ ಕರೆ, ಸಾಮಾಜಿಕ ಜಾಲತಾಣ ಸಹಿತ ಎಲ್ಲ ಆಯಾಮಗಳಲ್ಲೂ ತನಿಖೆ ತೀವ್ರಗೊಂಡಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ವಿಶಾಲ ಗಾಣಿಗ ಜುಲೈ.12 ರಂದು ತಮ್ಮ ಫ್ಲಾೃಟ್‌ನ ಕೊಠಡಿಯಲ್ಲಿ ವಯರ್‌ನಿಂದ ಕುತ್ತಿಗೆ ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದಲ್ಲಿರುವ 2 ಲಕ್ಷ ರೂ. ಮೌಲ್ಯದ ಆಭರಣ ನಾಪತ್ತೆಯಾಗಿದ್ದು, ಹಣಕ್ಕಾಗಿ ನಡೆದ ಕೃತ್ಯ ಎಂದು ಆರಂಭದಲ್ಲಿ ಬಿಂಬಿತವಾಗಿತ್ತು. ಈ ನಡುವೆ ಅಂದು ವಿಶಾಲಾ ತೆರಳಿದ್ದ ಆಟೋರಿಕ್ಷಾ ಚಾಲಕನನ್ನು ತನಿಖೆಗೆ ಒಳಪಡಿಸಲಾಗಿತ್ತು.