ಉಡುಪಿ ಗಡಿ 14 ದಿನ ಸೀಲ್‌ಡೌನ್

corona virus2
Published on

ಉಡುಪಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 15ರ ರಾತ್ರಿ 8ರಿಂದ 29ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಸಿಎಂ ವಿಡಿಯೋ ಕಾನ್ಫರೆನ್ಸ್ ಬಳಿಕ ಉಸ್ತುವಾರಿ ಸಚಿವರು, ಶಾಸಕರು, ವೈದ್ಯಕೀಯ ತಜ್ಞರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊರ ಜಿಲ್ಲೆಯಿಂದ ಬರಲು ಮತ್ತು ಹೋಗಲು ಬುಧವಾರ ರಾತ್ರಿ 8 ಗಂಟೆ ತನಕ ಅವಕಾಶವಿದೆ. ಈ ಅವಧಿಯಲ್ಲಿ ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳನ್ನು ಎಂದಿನಂತೆ ನಡೆಯಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರಕು ಸಾಗಾಟ, ವಸ್ತುಗಳ ಸಾಗಾಣಿಕೆಗೆ ನಿರ್ಬಂಧಗಳಿಲ್ಲ. ತುರ್ತು ಸಂದರ್ಭದಲ್ಲಿ ಜಿಲ್ಲೆಯಿಂದ ಹೊರ ಹೋಗಲು ಮತ್ತು ಪ್ರತಿನಿತ್ಯದ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರಿಗೆ- ಪಕ್ಕದ ಜಿಲ್ಲೆಗೆ ಹೋಗುವರಿಗೆ ಪಾಸ್ ನೀಡಲಾಗುವುದು ಎಂದರು.

ಸಾರ್ವಜನಿಕ ಬಸ್ ಸಂಚಾರ ನಿರ್ಬಂಧಿಸಲಾಗಿದೆ. ಸಂತೆಗಳು ನಡೆಯುವುದಿಲ್ಲ. ಯಾವುದೇ ಸಭೆ, ಸಮಾರಂಭ, ಹಬ್ಬ, ಆಚರಣೆಗಳಿಗೆ ಅವಕಾಶವಿಲ್ಲ. ದೇವಸ್ಥಾನ, ಚರ್ಚ್ ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಅರ್ಚಕರು, ಮೌಲ್ವಿಗಳು, ಧರ್ಮಗುರುಗಳು, ಭಕ್ತರು ಸೇರಿ 20ಕ್ಕಿಂತ ಜಾಸ್ತಿ ಜನ ಇರುವಂತಿಲ್ಲ. ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ಇರುವುದಿಲ್ಲ. 50 ಜನ ಮೀರದಂತೆ ವಿವಾಹ ಕಾರ್ಯಕ್ರಮ ನಡೆಸಬಹುದು. ಅಂತ್ಯ ಸಂಸ್ಕಾರದಲ್ಲಿ 20 ಜನ ಮಾತ್ರ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.

ವೈಜ್ಞಾನಿಕ ಕಾರಣ: ಹೊರಗಿನಿಂದ ಜಿಲ್ಲೆಗೆ ಬಂದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಂಡುಬರುತ್ತಿದೆ. ಕೋವಿಡ್ ಸೋಂಕಿತರ ಪೈಕಿ ಪ್ರಯಾಣ ಹಿನ್ನೆಲೆಯವರು ಶೇ.8.86 ಹಾಗೂ ಅವರ ಪ್ರಾಥಮಿಕ ಸಂಪರ್ಕಿತರ ಪ್ರಮಾಣ ಶೇ.14.2 ಇದ್ದರೆ, ಸ್ಥಳೀಯ ಸೋಂಕಿತರ ಪ್ರಮಾಣ ಶೇ.2 ಮಾತ್ರ. ಜಿಲ್ಲೆಯ ಗಡಿಯನ್ನು ಬಂದ್ ಮಾಡುವುದರಿಂದ ಸೋಂಕಿತರ ಜಿಲ್ಲೆಯ ಒಳ, ಹೊರ ಪ್ರವೇಶವನ್ನು ತಡೆಯಬಹುದು. ಇದರಿಂದ ಹರಡುವಿಕೆ ನಿಯಂತ್ರಿಸಲು ಸಾಧ್ಯ. ಜಿಲ್ಲಾ ತಜ್ಞರ ವೈದ್ಯರ ಸಮಿತಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೋಂ ಐಸೋಲೇಷನ್‌ನಲ್ಲಿ ಪ್ರಸ್ತುತ 20 ಮಂದಿ ಇದ್ದು, 10 ವರ್ಷದಿಂದ 50 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net