ಜ.21ರಿಂದ ವಿಜಯ ಸಂಕಲ್ಪ ಅಭಿಯಾನ

kuiladi-suresh-nayak
Published on

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಜ.21ರಿಂದ 29ರವರೆಗೆ ಜಿಲ್ಲೆಯಾದ್ಯಂತ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದಲ್ಲಿ ಬೂತ್ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳನ್ನು ಸಂಪರ್ಕಿಸಿ ಸರ್ಕಾರದ ಸಾಧನೆಗಳ ಕರಪತ್ರ ಹಾಗೂ ಸ್ಟಿಕ್ಕರ್ ವಿತರಿಸಲಾಗುವುದು. ಸದಸ್ಯತ್ವ ಅಭಿಯಾನ ಅಂಗವಾಗಿ 8000090009 ಸಂಖ್ಯೆಗೆ ಮಿಸ್‌ಕಾಲ್ ಕೊಡುವ ಮೂಲಕ ನೋಂದಣಿ ಮಾಡಿಕೊಳ್ಳಲಾಗುವುದು. ಬೂತ್ ವ್ಯಾಪ್ತಿಯಲ್ಲಿ 10 ಕಡೆಗಳಲ್ಲಿ ಕಮಲದ ಚಿಹ್ನೆಯ ಗೋಡೆ ಬರಹ ಬರೆಯಲಾಗುವುದು. ಫಲಾನುಭವಿಗಳನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.

ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ. ಹೀಗಾಗಿ ಯಾರೂ ಕೂಡ ನಾನೇ ಅಭ್ಯರ್ಥಿ ಎಂಬುದಾಗಿ ಹೇಳುವಂತಿಲ್ಲ. ಕೆಲವು ಕಾರ್ಯಕರ್ತರು ಹಾಗೂ ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ಹೆಸರು ತೇಲಿಬಿಡುತ್ತಿದ್ದಾರೆ. ಅದಕ್ಕೆ ಪಕ್ಷದಲ್ಲಿ ಮಾನ್ಯತೆಯಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಪಕ್ಷದ ಕೇಂದ್ರ ಸಮಿತಿ 2 ಬಾರಿ ಆಂತರಿಕ ಸಮೀಕ್ಷೆ ನಡೆಸಿದೆ. 5 ವಿಧಾನಸಭಾ ಕ್ಷೇತ್ರದಲ್ಲಿ ವಿಸ್ತಾರಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ನಾ ನಾಯಕಿ ದುಡ್ಡು ಹೇಗೆ ತರುತ್ತಾರೆ?
ಕಾಂಗ್ರೆಸ್ ಪಕ್ಷದ ನಾ ನಾಯಕಿ ಉತ್ತರಪ್ರದೇಶದಲ್ಲಿ ಎಡ್ರೆಸ್ ಇಲ್ಲದೆ ಹೋಗಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರಿಗೆ 2 ಸಾವಿರ ನೀಡುವ ಆಮಿಷಕ್ಕೆ ಮತದಾರರು ಬಲಿಯಾಗುವುದಿಲ್ಲ. ಇದಕ್ಕೆ ಬಜೆಟ್‌ನಲ್ಲಿ ಹೇಗೆ ದುಡ್ಡು ತರುತ್ತಾರೆ ಎಂಬುದನ್ನು ಕೇಳಬೇಕು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದ ತಕ್ಷಣ ಡಿಸೇಲ್‌ಗೆ 3 ರೂ. ಹೆಚ್ಚು ಮಾಡಿದೆ. ಈ ಬಗ್ಗೆ ಮುಖಂಡರನ್ನು ಕೇಳಿದರೆ ಮುಖ್ಯಮಂತ್ರಿಯನ್ನು ಕೇಳಿ ಎನ್ನುತ್ತಿದ್ದಾರೆ. ಬಿಜೆಪಿಗೆ ಚುನಾವಣೆ ಗೆಲ್ಲುವುದಕ್ಕಿಂತ ದೇಶಹಿತ ಮುಖ್ಯ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮನೋಹರ ಕಲ್ಮಾಡಿ, ರಾಘವೇಂದ್ರ ಕಿಣಿ, ನಯನಾ ಗಣೇಶ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net