ಸಂವಿಧಾನದಲ್ಲಿ ಧಮಾರ್ಧಾರಿತ ಮೀಸಲಾತಿಗೆ ಅವಕಾಶವಿಲ್ಲ

udp-26-bjp
Published on

ಉಡುಪಿ: ಕಾಂಗ್ರೆಸ್​ ಮತ್ತೊಮ್ಮೆ ತುಷ್ಟೀಕರಣದ ಹಳೇ ಚಾಳಿಯನ್ನು ಮುಂದುವರಿಸಿದೆ. ಸಾರ್ವಜನಿಕ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ಮುಸ್ಲಿಮರಿಗೆ ನೀಡುವುದು ಕಾನೂನುಬಾಹಿರ. ಡಾ. ಬಿ.ಆರ್​. ಅಂಬೇಡ್ಕರ್​ ಅವರು ರಚಿಸಿದ ಸಂವಿಧಾನದಲ್ಲಿ ಧಮಾರ್ಧಾರಿತ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್​ ಸಹಿತ ವಿವಿಧ ಕೋರ್ಟ್​ಗಳೂ ತೀರ್ಪು ಕೊಟ್ಟಿವೆ. ಆದರೂ ಈ ರೀತಿಯ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್​ನ ನಡೆ ಸಂವಿಧಾನಕ್ಕೆ ಮಾಡಿರುವ ಘೋರ ಅಪಮಾನ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ತಿಳಿಸಿದರು.

ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯ ಧನವನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು ಕಾಂಗ್ರೆಸ್​ನ ಅತಿಯಾದ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದರು.

ವಿಧಾನ ಸಭೆಯಲ್ಲಿ ಅಧ್ಯಕ್ಷರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀಮಾರ್ನವಾಗಿದೆ. ಈ ನಿರ್ಧಾರ ಜನತೆಯಿಂದ ಆಯ್ಕೆಯಾದ ಶಾಸಕರಿಗೆ ಮಾತ್ರವಲ್ಲದೆ ಕ್ಷೇತ್ರದ ಮತದಾರರಿಗೂ ಮಾಡಿದ ಘೋರ ಅವಮಾನವಾಗಿದೆ. ಈ ತೀಮಾರ್ನವನ್ನು ಮರು ಪರಿಶೀಲಿಸಿ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಎಸ್​.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ರಾಜೇಶ್​ ಕಾವೇರಿ, ಸದಾನಂದ ಉಪ್ಪಿನಕುದ್ರು, ಮಹಾವೀರ ಹೆಗ್ಡೆ, ರತ್ನಾಕರ್​ ಇಂದ್ರಾಳಿ, ಶಿವಕುಮಾರ್​ ಅಂಬಲಪಾಡಿ, ರಾಘವೇಂದ್ರ ಕುಂದರ್​, ಶ್ರೀಕಾಂತ್​ ನಾಯಕ್​, ಉದಯ ಕೋಟ್ಯಾನ್​, ವಿಜಯ ಕುಮಾರ್​ ಉದ್ಯಾವರ, ಶ್ರೀನಿಧಿ ಹೆಗ್ಡೆ, ಗಿರೀಶ್​ ಎಂ. ಅಂಚನ್​, ಪ್ರಿಯದರ್ಶಿನಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net