ಗ್ಯಾರೆಂಟಿ ಸಮಿತಿ ಮೂಲಕ ಜನರ ತೆರಿಗೆ ಹಣ ಲೂಟಿ

udp-15-joshi bjp
Published on

ಉಡುಪಿ: ಗ್ಯಾರೆಂಟಿ ಯೋಜನೆಗಳಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸುವ ಮೂಲಕ ಸಂಬಳ ಮತ್ತು ಭತ್ಯೆ ಹೆಸರಿನಲ್ಲಿ ಜನರ ತೆರಿಗೆ ಹಣ ಲೂಟಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರಗಳಿಗೆ ಕಡಿವಾಣ ಹಾಕಲು ಜನಾಭಿಪ್ರಾಯ ರೂಪಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಬ್​ ಕಾ ಸಾತ್​ ಸಬ್​ ಕಾ ವಿಕಾಸ್​ ಮಂತ್ರವನ್ನು ಪಠಿಸುತ್ತಿದ್ದರೆ ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ, 170 ಹಾಸ್ಟೆಲ್​ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಆದರೆ ಎಸ್​ಸಿ ಮತ್ತು ಎಸ್​ಟಿ, ಹಿಂದುಳಿದ ವರ್ಗಗಳ ಮಕ್ಕಳಿಗೆ ಹಾಸ್ಟೆಲ್​ಗಳಲ್ಲಿ ಸೀಟು ಸಿಗುತ್ತಿಲ್ಲ. ಮುಸ್ಲಿಮರಿಗೆ ಹಿಂದುಳಿದ ವರ್ಗದಲ್ಲಿರುವ ಶೇ. 4 ಮೀಸಲಾತಿಯನ್ನು ಶೇ.10ಕ್ಕೆ ಏರಿಕೆ ಮಾಡಲು ಸರ್ಕಾರ ಹೊರಟಿದೆ. ಈ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕಾಂಗ್ರೆಸ್​ ಪರಜೀವಿ ಪಾರ್ಟಿ

ಕಾಂಗ್ರೆಸ್​ ಸರ್ಕಾರ ಮಾತ್ರ ಪೂರ್ಣಾವಧಿ ಪೂರೈಸಲು ಸಾಧ್ಯವೆಂಬ ಭ್ರಮೆಯನ್ನು ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರ್ಕಾರ ಹೋಗಲಾಡಿಸಿದೆ. ನೆಹರೂ ಬಳಿಕ ಸತತ 3ನೇ ಬಾರಿಗೆ ಪ್ರಧಾನಿಯಾದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್​ ಪರಜೀವಿ ಪಾರ್ಟಿಯಾಗಿದ್ದು, ಬೇರೆ ಪಕ್ಷಗಳ ಆಶ್ರಯವಿಲ್ಲದೆ ಯಾವುದೇ ರಾಜ್ಯವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಲೋಕಸಭಾ ಚುನಾವಣೆ ಬಳಿಕ ನಡೆದ 5 ಚುನಾವಣೆಗಳಲ್ಲಿಯೂ ಕಾಂಗ್ರೆಸ್​ ಸೋತಿದೆ. ಕರ್ನಾಟಕದಲ್ಲೂ ಕಾಂಗ್ರೆಸ್​ ಬೇರುಗಳನ್ನು ಕಿತ್ತೆಸೆಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಭಾರತದಲ್ಲಿ ಹೆಚ್ಚಿನ ಹೂಡಿಕೆ

ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಎಲ್ಲಾ ಸಮುದಾಯಕ್ಕೆ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ದೇಶದ 500 ಪ್ರಮುಖ ಕಂಪೆನಿಗಳಲ್ಲಿ ಯುವಜನರಿಗೆ ವಿದ್ಯಾರ್ಥಿವೇತನದೊಂದಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಜಾರಿಗೊಳಿಸಿದೆ. ಇದು ಅತ್ಯಂತ ದೂರದೃಷ್ಟಿಯ ಯೋಜನೆಯಾಗಿದೆ. ಯಾಕೆಂದರೆ ಪ್ರಪಂಚದ ಬಹಳಷ್ಟು ದೇಶಗಳು ವೃದ್ಧದೇಶಗಳಾಗಿ ಬದಲಾಗುತ್ತಿದ್ದು, ಭಾರತದ ಕುಶಲಕರ್ಮಿಗಳಿಗೆ ವಿದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿವೆ. 2014ರಲ್ಲಿ 249 ಗಿಗಾವ್ಯಾಟ್​ ಇದ್ದ ವಿದ್ಯುತ್​ ಉತ್ಪಾದನೆ 2024ರಲ್ಲಿ 469 ಗಿಗಾವ್ಯಾಟ್​ಗೆ ಏರಿಕೆಯಾಗಿದ್ದು, ಇದರಿಂದ ಭಾರತದಲ್ಲಿ ಹೂಡಿಕೆ ಪ್ರಮಾಣವೂ ಹೆಚ್ಚಳವಾಗಿದೆ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್​ ಸುವರ್ಣ, ಕಿರಣ್​ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಮೆಂಡನ್​, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯೆ ರಜನಿ ಹೆಬ್ಬಾರ್​, ಪ್ರ.ಕಾ. ರೇಶ್ಮಾ ಉದಯ್​ ಶೆಟ್ಟಿ, ಹೆರ್ಗ ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net