'ವಕ್ಫ್' ಅಪಪ್ರಚಾರಕ್ಕೆ ಕಿವಿಗೊಡದಿರಿ, ಭಯಪಡಬೇಡಿ...

Saleem
Published on

ಮುಸ್ಲಿಂ ಸಮುದಾಯಕ್ಕೆ ಎಂ.ಸಲೀಂ ಅಂಬಾಗಿಲು ಸಲಹೆ

ವಕ್ಫ್​ ತಿದ್ದುಪಡಿ ನೂತನ ಮಸೂದೆ ಜಾರಿಗೆ ಬೆಂಬಲ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಸರ್ಕಾರ ಮಂಡಿಸಿರುವ ವಕ್ಫ್​ ತಿದ್ದುಪಡಿ ನೂತನ ಮಸೂದೆ ಸಂಸತ್​ನಲ್ಲಿ ಅಂಗೀಕಾರವಾಗಿದೆ. ಈ ಕುರಿತಾದ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡಬೇಕಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಮುಖಂಡ, ರಾಜ್ಯ ಹಜ್​ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ಸಲಹೆ ನೀಡಿದ್ದಾರೆ.

ವಕ್ಫ್​ ತಿದ್ದುಪಡಿ ಮಸೂದೆ ವರದಿಯ ಕುರಿತಂತೆ ಅಧಿವೇಶನದಲ್ಲಿ ಗಂಭೀರ ಚರ್ಚೆಯಾಗಿದ್ದು, ಗಮನಾರ್ಹ ಅಂಶವಾಗಿದೆ. ಆದರೆ, ಕುರಿತಾಗಿ ವಿರೋಧ ಪಕ್ಷಗಳು ತುಷ್ಟೀಕರಣ ನೀತಿ ಅನುಸರಿಸುತ್ತಿವೆ. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಈ ಮಸೂದೆಯು ಮುಸ್ಲಿಂ ವಿರೋಧಿ ಎಂದು ಬೊಬ್ಬೆ ಹಡೆಯುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಸದ ಬುಟ್ಟಿಗೆ ಎಸೆದ ಕಾಂಗ್ರೆಸ್​

ಈ ಹಿಂದೆ ಕನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್​ ಎಂ. ಅವರು ರಾಜಕೀಯ ಕುಳಗಳು ಮತ್ತು ಕೆಲವೊಂದು ಸರ್ಕಾರಿ ಸಂಸ್ಥೆಗಳಿಂದ ವಕ್ಫ್​ ಆಸ್ತಿಗಳ ಒತ್ತುವರಿ ಹಾಗೂ ಅನಧಿಕೃತ ಪರಭಾರೆ ಕುರಿತು ವರದಿ ನೀಡಿದ್ದರು. ಅದನ್ನು ಸರ್ಕಾರ ಸದನದಲ್ಲಿ ಮಂಡಿಸಲು ಮುಂದಾಗಿತ್ತು. ಆದರೆ, ಅದೇ ಸಮಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಅಂತ್ಯವಾಗಿತ್ತು. ಬಳಿಕ ರಾಜ್ಯದ ಆಡಳಿತ ಹಿಡಿದ ಕಾಂಗ್ರೆಸ್​ ಸರ್ಕಾರವು ತನ್ನ ಶಾಸಕರು, ಸಚಿವರು ಹಾಗೂ ಮುಖಂಡರಿಂದಲೇ ವಕ್ಫ್​ ಆಸ್ತಿ ಲೂಟಿ ಆಗಿರುವುದನ್ನು ಮುಚ್ಚಿಡಲು ಕುತಂತ್ರ ನಡೆಸಿತು. ಈ ಹಿಂದೆ ನೀಡಿದ್ದ ಸದರಿ ವರದಿಯನ್ನೇ ಕಸದ ಬುಟ್ಟಿಗೆ ಎಸೆದಿದೆ ಎಂದು ಸಲೀಂ ತಿಳಿಸಿದ್ದಾರೆ.

 ಸತ್ಯಾಸತ್ಯತೆ ಇನ್ನಾದರೂ ಅರಿತುಕೊಳ್ಳಿ

ಎಲ್ಲ ಒಳಿತು-ಕೆಡುಕುಗಳ ಬಗ್ಗೆ ಚಿಂತಿಸಿ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ವಕ್ಫ್​ ತಿದ್ದುಪಡಿ ನೂತನ ಮಸೂದೆಯ ಸತ್ಯಾಸತ್ಯತೆಯನ್ನು ಇನ್ನಾದರೂ ಅರಿತುಕೊಳ್ಳಿ. ನಮ್ಮ ಪವಿತ್ರಾತ್ಮರ, ತ್ಯಾಗಜೀವಿಗಳ ಕೊಡುಗೆಯನ್ನು ತಮ್ಮ ಸ್ವಯಂ ಸ್ವಾರ್ಥಕ್ಕೆ ಬಳಸಿ ದುರುಪಯೋಗಮಾಡಿ ಶಾಪಕ್ಕೆ ಒಳಗಾಗಬೇಡಿ. ಮುಸ್ಲಿಂ ಸಮುದಾಯದ ಬಡವರ ಹಕ್ಕು, ಏಳಿಗೆಗಾಗಿ ಶ್ರಮಿಸಿ ಪುಣ್ಯದ ಕೆಲಸಕ್ಕೆ ಮುಂದಾಗಿ ಎಂದು ಎಂ.ಸಲೀಂ ಅಂಬಾಗಿಲು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ್ದಾರೆಯೇ?

ಅನಾದಿ ಕಾಲದಿಂದಲೂ ಮುಸ್ಲಿಂ ಸಮುದಾಯದ ಹಿರಿಯರು, ಆಸ್ತಿವಂತರು, ತ್ಯಾಗಜೀವಿಗಳು ಬಡವರ ಬಗ್ಗೆ ಕಾಳಜಿ ಹೊಂದಿ ತಮ್ಮ ಒಡೆತನದ ಅಸ್ತಿಗಳನ್ನು ವಕ್ಫ್​ ಮಾಡಿ ಇಟ್ಟಿದ್ದರು. ಪವಿತ್ರ ಉದ್ದೇಶದೊಂದಿಗೆ ಅದನ್ನು ಅಲ್ಲಾಹನ ಆಸ್ತಿ ಎಂದು ಘೋಷಿಸಿದ್ದರು. ಇದು ಮುಸ್ಲಿಂ ಸಮುದಾಯದ ಒಳಿತಿಗೆ ಎನ್ನುವುದು ನಿಸ್ಸಂದೇಹವಲ್ಲವೇ? ಮುಸ್ಲಿಂ ಸಮುದಾಯದ ಶ್ರೇಯೋಭಿವೃದ್ಧಿ, ಬಡ ಮುಸ್ಲಿಮರ ಕಲ್ಯಾಣಕ್ಕಾಗಿ ದುಡಿಯಬೇಕಾಗಿದ್ದ ಸ್ಥಳೀಯ, ರಾಜ್ಯ, ರಾಷ್ಟ್ರೀಯ ವಕ್ಫ್​ ಸಂಸ್ಥೆಗಳು ಏನು ಮಾಡುತ್ತಿವೆ? ಮುಸ್ಲಿಂಪರ ಎನ್ನುವ ಸಂಘಟನೆಗಳು, ಎಷ್ಟು ರಾಜಕೀಯ ಪಕ್ಷಗಳು ವಕ್ಫ್​ ಆಸ್ತಿ ಉಪಯೋಗಿಸಿ ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದು ಸಲೀಂ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net