

ಉಡುಪಿ: ಕರ್ನಾಟಕ ಚುನಾವಣೆ ಅಭಿವೃದ್ಧಿ ದೃಷ್ಟಿಯಿಂದ ಅತೀ ಮಹತ್ವ ಪಡೆದಿದೆ. ಕಾಂಗ್ರೆಸ್‌ನದ್ದು ರಿವರ್ಸ್‌ಗೇರ್ ಸರ್ಕಾರವಾಗಿದ್ದು, ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಕರ್ನಾಟಕ ರಾಜ್ಯ ಎಟಿಎಂ ರೀತಿ ಬಳಕೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಅನಿಲ್ ಆ್ಯಂಟನಿ ಹೇಳಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸ್ಟಾರ್ಟ್‌ಹಬ್ ಆಗಿದ್ದು, 2014ರಲ್ಲಿ 500ರಷ್ಟು ಇದ್ದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಈಗ 1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಸುಮಾರು 40 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.ಡಬಲ್ ಇಂಜಿನ್ ಸರ್ಕಾರದ ಮಹತ್ವ ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಭ್ರಷ್ಟಾಚಾರ ಮತ್ತು ಕೋಮುವಾದ ಹೆಚ್ಚಾಗಲಿದ್ದು, ಪಿಎಫ್‌ಐ ಮತ್ತು ಎಸ್‌ಡಿಪಿಐ ಮೆಚ್ಚಿಸಲು ಬಜರಂಗ ದಳ ನಿಷೇಧಿಸಲು ಹೊರಟಿದೆ ಎಂದರು.
ಕೇರಳ ಸ್ಟೋರಿ ಸಿನೆಮಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರ ಬಣ್ಣ ಬಯಲಾಗಿದೆ. 3 ತಿಂಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದಲ್ಲಿ ತಿರಸ್ಕರಿಸಿದ ವಿಷಯದಲ್ಲಿ ಬಿಬಿಸಿ ಡಾಕ್ಯುಮೆಂಟರಿ ಮಾಡಿತ್ತು. ಈ ಸಂದರ್ಭದಲ್ಲಿ ವಾಕ್ ಸ್ವಾತಂತ್ರೃ ಬಗ್ಗೆ ಈ ನಾಯಕರು ಬಹಳಷ್ಟು ಮಾತನಾಡಿದ್ದಾರೆ. ಆದರೆ ಸತ್ಯ ಘಟನೆ ಆಧರಿಸಿದ ಚಿತ್ರ ಪ್ರದರ್ಶನವನ್ನು ಬ್ಯಾನ್ ಮಾಡಲು ಮುಂದಾಗಿದ್ದಾರೆ. ರಾಜಕೀಯ ಷಡ್ಯಂತ್ರಕ್ಕಾಗಿ ಧಾರ್ಮಿಕನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದು ಬಿಜೆಪಿ ನಿಲುವಾಗಿದೆ. ಕೇರಳದಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ವೃದ್ಧಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮುಖ್ಯವಾಹಿನಿ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚುನಾವಣಾ ಪ್ರಭಾರಿ ಸುರೇಶ್ ಶೆಟ್ಟಿ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ವಕ್ತಾರ ರಾಘವೇಂದ್ರ ಕಿಣಿ, ಗುರುಪ್ರಸಾದ್, ಗೀತಾಂಜಲಿ ಸುವರ್ಣ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.