ನೊಂದವರನ್ನು ಅಪ್ಪಕೊಂಡಿದ್ದ ಜಗದ್ಗುರು ಪೋಪ್​ ಫ್ರಾನ್ಸಿಸ್​

Pope 1
Published on

ಉಡುಪಿಯ ಬಿಷಪ್​ ಜೆರಾಲ್ಡ್​ ಐಸಾಕ್​ ಲೋಬೊ ಶೋಕ ಸಂದೇಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಕ್ರೈಸ್ತ ಸಮುದಾಯದ ಪರಮೋಚ್ಚ ಧರ್ಮಗುರು ಪೋಪ್​ ಫ್ರಾನ್ಸಿಸ್​ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್​ ಐಸಾಕ್​ ಲೋಬೊ ದು:ಖ ವ್ಯಕ್ತಪಡಿಸಿದ್ದಾರೆ.

ಸಂತ ಪೀಟರ್​ ಅವರ 266ನೇ ಉತ್ತರಾಧಿಕಾರಿಯಾಗಿ ಪೋಪ್​ ಫ್ರಾನ್ಸಿಸ್​ ಅವರು ಕೆಸ್ತ ಧರ್ಮಸಭೆಯನ್ನು ನಮ್ರತೆ, ಸಹಾನುಭೂತಿ ಮತ್ತು ಸುವಾರ್ತೆಗೆ ಅಚಲವಾದ ಬದ್ಧತೆಯೊಂದಿಗೆ ಮುನ್ನಡೆಸಿದರು. ಅವರ ಪೋಪ್​ ಅಧಿಕಾರವು ಶಾಂತಿ, ನ್ಯಾಯ, ಬಡವರ ಬಗ್ಗೆ ಕಾಳಜಿ ಮತ್ತು ಸೃಷ್ಟಿಯ ಮೇಲಿನ ಪ್ರೀತಿಯ ದಣಿವರಿಯದ ಅನ್ವೇಷಣೆಯಿಂದ ಗುರುತಿಸಲ್ಪಟ್ಟಿತು. ವಿಭಜನೆಯಿಂದ ಮೋಡ ಕವಿದಿರುವ ಜಗತ್ತಿನಲ್ಲಿ ಅವರು ಭರವಸೆಯ ದಾರಿದೀಪವಾದರು, ಕರುಣೆಯೇ ಚರ್ಚ್​ನ ಅತ್ಯಂತ ದೊಡ್ಡ ಬಡಿತ ಎಂದು ಜಗತ್ತಿಗೆ ತೋರಿಸಿದರು.

ಸಂತೋಷದಿಂದ ಬದುಕಲು ಕರೆ

Pope 2
ಅರ್ಜೆಂಟೈನಾದ ಬ್ಯೂನಸ್​ ಐರಿಸ್​ನಲ್ಲಿ ಜನಿಸಿದ ಜಾರ್ಜ್​ ಮಾರಿಯೋ ಬರ್ಗೊಗ್ಲಿಯೊ ಎಂಬ ಪೋಪ್​ ಫ್ರಾನ್ಸಿಸ್​, ಪ್ರಪಂಚದ ಬಡವರು ಹಾಗೂ ತ್ಯಜಿಸಿದವರನ್ನು ಮತ್ತು ಗಾಯಗೊಂಡವರನ್ನು ತನ್ನೊಂದಿಗೆ ಅಪ್ಪಿಕೊಂಡ ಜಗದ್ಗುರುಗಳಾಗಿದ್ದರು. 2013ರ ಮಾ.13ರಂದು ಅವರ ಪೋಪ್​ ಹುದ್ದೆಯ ಮೊದಲ ಕ್ಷಣಗಳಿಂದ ಸಂತೋಷದಿಂದ ಬದುಕಲು ಪ್ರತಿಯೊಬ್ಬರಿಗೂ ಕರೆ ನೀಡಿದರು. ಚರ್ಚ್​ ಸೇವೆಯ ದಾರಿಯಲ್ಲಿ ಸಾಗಲು, ಸಹಾನುಭೂತಿಯಿಂದ ಕೇಳಲು ಮತ್ತು ನಮ್ರತೆಯಿಂದ ಸೇವೆ ಮಾಡಲು ಕರೆ ನೀಡಿದರು.

 ದೇವರ ಮೃದುತ್ವದ ಜೀವಂತ ಸಂಕೇತ

ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ಮುರಿದ ಜಗತ್ತಿನಲ್ಲಿ ಸೇತುವೆ ನಿರ್ಮಿಸುವ ಮತ್ತು ಆಗಾಗ ದೇವರ ಮೃದುತ್ವದ ಜೀವಂತ ಸಂಕೇತವಾಗಿದ್ದರು. ತಮ್ಮ ಪಾದ್ರಿತ್ವದ ಅವಧಿಯಲ್ಲಿ ಪ್ರಾರ್ಥನೆಯು ಶಕ್ತಿಯಲ್ಲ, ಅದು ಕೆಸ್ತರ ಜೀವನದ ಹೃದಯ ಎಂದು ನಮಗೆಲ್ಲ ನೆನಪಿಸಿದರು. ಜನರಿಗೆ ಕ್ರಿಸ್ತನ ಮುಖವನ್ನು ಪ್ರತಿಬಿಂಬಿಸಿದರು. ಅವರ ವಿಶ್ವಪತ್ರ ಕೋಶಗಳಾದ ಇವಾಂಜೆಲಿ ಗೌಡಿನ್ಮ್​, ಲೌದಾತೋ ಸಿ ಮತ್ತು ಫ್ರಾಟೆಲ್ಲಿ ಟುಟ್ಟಿ ಮೂಲಕ ನ್ಯಾಯಯುತ, ಕರುಣಾಮಯಿ ಮತ್ತು ಏಕೀಕೃತ ಮಾನವನಿಗೆ ಧೈರ್ಯಶಾಲಿ ಮತ್ತು ಪ್ರವಾದಿಯ ದೃಷ್ಟಿ ನೀಡಿದರು.

ಅವರು ಆತ್ಮವನ್ನು ದೇವರ ಮಿತಿಯಿಲ್ಲದ ಕರುಣೆಗೆ ಒಪ್ಪಿಸುತ್ತಿದ್ದಂತೆ, ಅವರ ಪಿತೃತ್ವದ ಮಾರ್ಗದರ್ಶನ ಮತ್ತು ನಿರಂತರ ಸಾಕ್ಷಿಗಾಗಿ ಕೃತಜ್ಞತೆ ಸಲ್ಲಿಸುತ್ತ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಸಾಮರಸ್ಯಕ್ಕೆ ಕೊಡುಗೆ ಅಪಾರ

Pope Box
ಕ್ರೈಸ್ತ ಸಮುದಾಯದ ಪರಮೋಚ್ಚ ಧರ್ಮಗುರು ಪೋಪ್​ ಫ್ರಾನ್ಸಿಸ್​ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ ದು:ಖ ವ್ಯಕ್ತಪಡಿಸಿದ್ದಾರೆ. ಪೋಪ್​ ಫ್ರಾನ್ಸಿಸ್​ ಅವರ ನಿಧನದಿಂದಾಗಿ ಜಗತ್ತು ಶಾಂತಿ ದೂತರೊಬ್ಬರನ್ನು ಕಳೆದುಕೊಂಡಿದ್ದು, ಅವರು ಮಾನವ ಮೌಲ್ಯಗಳು, ಧಾರ್ಮಿಕ ಸಾಮರಸ್ಯ ಮತ್ತು ಪರಿಸರ ರಕ್ಷಣೆ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಕೆಥೊಲಿಕ್​ ಪವಿತ್ರ ಸಭೆಗೆ ಅರ್ಥಪೂರ್ಣ ನೇತೃತ್ವ ವಹಿಸಿದ್ದರು. ಸಾಮಾಜಿಕ ನ್ಯಾಯ ಹಾಗೂ ಅಂತರ್​ ಧಮೀರ್ಯ ಸಂವಾದಕ್ಕೆ ಒತ್ತು ನೀಡಿದ್ದರು. ಸಂಪ್ರದಾಯವಾದದ ಹೊರತಾಗಿಯೂ ಉದಾರವಾದಿ ಪ್ರವೃತ್ತಿಯನ್ನು ಜಗತ್ತಿಗೆ ಸಾರಿದ್ದರು. ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಶಾಂತಿಗೆ ಪೋಪ್​ ಫ್ರಾನ್ಸಿಸ್​ ಅವರ ಕೊಡುಗೆ ಅಪಾರ. ಅವರ ಜನಪರ ನಿಲುವನ್ನು ಜಗತ್ತಿನ ಹಲವು ರಾಷ್ಟ್ರಗಳು ಕೊಂಡಾಡುತ್ತಿದ್ದು, ಅವರ ನಿಧನ ಜಗತ್ತಿಗೆ ದೊಡ್ಡ ನಷ್ಟ ಉಂಟು ಮಾಡಿದೆ. ಪೋಪ್​ ಫ್ರಾನ್ಸಿಸ್​ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net