

ಬೆಳಗಾವಿ: ಉಡುಪಿ ಶ್ರೀ ಭಂಡಾರಕೇರಿ ಮಠದ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ( ಓಆರ್‌ಐ) ಸೇರಿ ಮೂವರು ವಿದ್ವಾಂಸರಿಗೆ ಪ್ರದಾನ ಮಾಡಲಾಯಿತು.
ಬೆಳಗಾವಿಯ ವೇಣುಗೋಪಾಲ ಸಭಾಂಗಣದಲ್ಲಿ ಶನಿವಾರ ಶ್ರೀಮಠ, ಮಾಧ್ವ ರಾದ್ಧಾಂತ ಸಂವರ್ಧಕಸಭಾ 82ನೇ ಅಧಿವೇಶನ, ವೇದವ್ಯಾಸ ಜಯಂತಿ ಮತ್ತು ವಿದ್ಯಾಮಾನ್ಯ ತೀರ್ಥರ 25ನೇ ಆರಾಧನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಣ್ಯರಿಗೆ ಗೌರವಾರ್ಪಣೆ ಮಾಡಲಾಯಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ , ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಅವರು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಡಿ.ಪಿ. ಮಧುಸೂದನಾಚಾರ್ಯರಿಗೆ ವೇದಪೀಠ ಪ್ರಶಸ್ತಿ (1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ) ಪ್ರದಾನ ಮಾಡಿದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ಪ್ರಾಧ್ಯಾಪಕ ವೆಂಕಟೇಶ ಬಾಯರಿ ಅವರಿಗೆ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ, ಬೆಳಗಾವಿಯ ವಿಶ್ವ ಮಧ್ವ ಮಹಾಪರಿಷತ್ ಸಂಚಾಲಕ ಪಂಡಿತ ಕಟ್ಟಿ ಪ್ರಮೋದಾಚಾರ್ಯಗೆ ರಾಜವಿದ್ಯಾಮಾನ್ಯ ಪ್ರಶಸ್ತಿ ಮತ್ತು ಮಂತ್ರಾಲಯದ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಯುವ ವಿದ್ವಾಂಸ ಶಶಿಧರ ಆಚಾರ್ಯರಿಗೆ ರಾಜಹಂಸ ಪ್ರಶಸ್ತಿ (ತಲಾ 50 ಸಾವಿರ ರೂ. ನಗದು) ನೀಡಲಾಯಿತು.
ಹಿರಿಯ ಪ್ರವಚನಕಾರ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಪಂಡಿತರಾದ ಗುರುರಾಜಾಚಾರ್ಯ ಜೋಷಿ, ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ, ವಿದುಷಿ ಶುಭಾ ಸಂತೋಷ, ಪಂಡಿತ ಬದರೀನಾಥಾಚಾರ್ಯ, ಶ್ರೀನಿಧಿ ವಾಸಿಷ್ಠ, ರಮೇಶ ಇತರರು ಸಾಕ್ಷಿಯಾದರು. ಇದೇ ವೇಳೆ ವೇದವ್ಯಾಸರ ಗ್ರಂಥಗಳಿಗೆ ನಾಣ್ಯ ತುಲಾಭಾರ ಮಾಡಿದ ವಿದ್ಯೇಶತೀರ್ಥ ಸ್ವಾಮೀಜಿ, ಭಕ್ತರಿಗೆ ಫಲ ಮಂತ್ರಾಕ್ಷತೆ ಸಹಿತ ನಾಣ್ಯಗಳನ್ನೂ ನೀಡಿದರು.