

ಉಡುಪಿ : ಭಗವಂತನನ್ನು ಒಲಿಸುವ ಸುಲಭ ಮಾರ್ಗವೇ ಭಜನೆ. ನಿರಂತರ ಭಜಿಪ ಭಕ್ತರಿಗೆ ಮೋಕ್ಷವನ್ನೂ ಕರುಣಿಸುವ ಶಕ್ತಿ ಭಜನೆಗಿದೆ. ಭಜನೆ ಭಕ್ತಿಮಾರ್ಗದ ಪ್ರಮುಖ ಅಂಗ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಉಡುಪಿ ರಥಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ಹಾಗೂ ಸಂಗಮ ಜಾನಪದ ಕಲಾಮೇಳ ಕಲ್ಮಾಡಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಉಡುಪಿ ಮತ್ತು ದ.ಕ.ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ -2023 ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಜನೆ ಎಂದರೆ ಭಗವಂತನ ಸ್ತುತಿ ಎಂದರ್ಥ.ಕುಳಿತು ಮಾಡುವ ಭಜನೆಯಲ್ಲಿ ಏಕಾಗ್ರತೆಯಿಂದ ಮೈಮರೆತರೆ, ಕುಣಿತ ಭಜನೆಯಲ್ಲಿ ಮೈಮರೆಯುವುದು ಕೂಡಾ ಭಗವಂತನ ಸೇವೆ. ಜಾನಪದ ಸೊಗಡಿನಿಂದ ಕೂಡಿರುವ ಈ ಭಜನೆ ಅಧ್ಯಾತ್ಮದ ಕೊಂಡಿಯಾಗಿದೆ ಎಂದು ಅವರು ತಿಳಿಸಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಮಾತನಾಡಿ, ಮಧ್ವಾಚಾರ್ಯರು, ಶ್ರೀಪಾದ ರಾಯರ ಕಾಲದಲ್ಲಿ ಭಜನೆ ಸಂಸ್ಕೃತಿ ಉತ್ತುಂಗದಲ್ಲಿತ್ತು. ಮುಂದೆ ಶ್ರೀವ್ಯಾಸರಾಯರ ಕಾಲದಲ್ಲಿ ದಾಸ ಪುರಂದರ, ಕನಕ ಮೊದಲಾದ ದಾಸ ಪರಂಪರೆ ಬೆಳೆದು ಬಂತು. ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣ ಎಂದೆಲ್ಲಾ ಆಧುನಿಕ ಜಂಜಾಟದಲ್ಲಿ ಕಳೆದುಹೋಗುತ್ತಿರುವ ಮಾನವನಿಗೆ ಮಾನಸಿಕ ನೆಮ್ಮದಿ, ಅಧ್ಯಾತ್ಮಿಕ ಸಾಧನೆಗೆ ಭಜನೆ ರಹದಾರಿ ಎಂದು ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, . ಒಂದು ಕಾಲದಲ್ಲಿ ಮನೆಮನೆಗಳಲ್ಲಿ ನಡೆಯುತ್ತಿದ್ದ ಈ ಭಜನೆ ಇಂದು ಆಧುನಿಕತೆಯ ಹೆಸರಿನಲ್ಲಿ ಮಾಯವಾಗುತ್ತಿದೆ. ಮಕ್ಕಳು, ಯುವಕರೆಲ್ಲಾಮೊಬೈಲ್‌ನ ಆಕರ್ಷಣೆಗೆ ತುತ್ತಾಗಿ ಮೈಮರೆತಿದ್ದಾರೆ. ಭಜನೆ ಒಂದೇ ಅವರನ್ನು ಮತ್ತೆ ಅಧ್ಯಾತ್ಮಿಕತೆಗೆ, ಸಂಸ್ಕಾರಕ್ಕೆ ಸೆಳೆಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಭಜನೆ, ಯಕ್ಷಗಾನದಂತಹ ಕಲೆಗಳಲ್ಲಿ ತೊಡಗಿಸಿಕೊಳ್ಳಲು ಹೆತ್ತವರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಭಜಕ ಗೋವಿಂದರಾಜ ಶೆಟ್ಟಿ ಬೈಲೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಸರ್ಜಿಕಲ್ ಆಂಡ್ ಹೆಲ್ತ್ಕೇರ್ ಸರ್ವಿಸಸ್ ಮುಖ್ಯಸ್ಥ ರವೀಂದ್ರ ಶೆಟ್ಟಿ, ಸಂಗಮ ಜಾನಪದ ಕಲಾಮೇಳದ ನಿರ್ದೇಶಕ ರಮೇಶ್ ಕಲ್ಮಾಡಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಉಭಯ ಜಿಲ್ಲೆಗಳ ಪ್ರಸಿದ್ಧ 15ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಶಂಕರದಾಸ್ ಚೆಂಡ್ಕಳ, ನಾಗರಾಜ ನಾಯಕವಾಡಿ ಹಾಗೂ ಜಯಕರ ಪೂಜಾರಿ ಕುಂದಾಪುರ ಸಹಕರಿಸಿದರು.