

ಉಡುಪಿ: ನಾಡಿನ ಹಿರಿಯ ವಿದ್ವಾಂಸ ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಗ್ಗೆ 11ಗಂಟೆಗೆ ಅಂಬಲಪಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೆಚ್ಚು ಪ್ರವಚನಗಳಿಗೆ ಹಾಜರಾಗದೆ ಮನೆಯಲ್ಲೇ ಇದ್ದು ಆಚಾರ್ಯತ್ರಯರ ಭಾಷ್ಯ ಒಳಗೊಂಡ ಭಗವದ್ಗೀತೆಯ ರಚನಾ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೆ ವಿಧಿ ನಿಯಮದಂತೆ ಈ ಕಾರ್ಯ ಪೂರ್ಣಗೊಳ್ಳುವ ಮೊದಲೇ ಅವರ ದೇಹಾಂತ್ಯವಾಗಿದೆ.
ಬನ್ನಂಜೆಯವರ ಕಿರಿಯ ಮಗ ಕೆಲವು ದಿನಗಳ ಹಿಂದೆ ಮೃತರಾಗಿದ್ದು, ಭಾನುವಾರ ಮನೆಯಲ್ಲೇ 12ನೇ ದಿನದ ವಿಧಿ ವಿಧಾನ ನಡೆಸಲು ತಯಾರಿ ನಡೆಸಲಾಗುತ್ತಿತ್ತು. ಈ ಮಧ್ಯೆ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ.