ಪರಿತ್ಯಕ್ತ ಮಗುವಿನ ಭವಿಷ್ಯ ‘ಪ್ರಜ್ವಲ’, ಪರಿತ್ಯಕ್ತ ಮಗುವಿಗೆ ನ್ಯಾಯಾಧೀಶರಿಂದ ನಾಮಕರಣ

baby name
Published on

ಉಡುಪಿ: ಹೆತ್ತಬ್ಬೆಗೆ ಬೇಡವಾಗಿ ಕಸದ ತೊಟ್ಟಿ ಸೇರಿದ್ದ ಹೆಣ್ಣು ಮಗುವಿಗೆ ನಾಮಕರಣದ ಜತೆ ತೊಟ್ಟಿಲು ಶಾಸ್ತ್ರವನ್ನೂ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ಆಗಸ್ಟ್ 10ರಂದು ಬೆಳಗ್ಗೆ ಉಡುಪಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಹೋಟೆಲ್‌ನ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು, ಈಗ ನಾಲ್ಕು ತಿಂಗಳು ತುಂಬಿದೆ.

ಮಗುವಿನ ಭವಿಷ್ಯ ಉಜ್ವಲವಾಗಲಿ, ಬದುಕು ಪ್ರಜ್ವಲಿಸಲಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಕಾವೇರಿ ಅವರು ಪ್ರಜ್ವಲ ಎಂದು ನಾಮಕರಣ ಮಾಡಿ ಶುಭಹಾರೈಸಿದರು.

ಸಂತೆಕಟ್ಟೆ ಕೃಷ್ಣಾನುಗ್ರಹ ದತ್ತು ಕೇಂದ್ರದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ, ಮಡಿಲ ಬೆಳಗು ದತ್ತು ಸ್ವೀಕಾರ ಹಾಗೂ ಪರಿತ್ಯಕ್ತ ಶಿಶುವಿನ ನಾಮಕರಣ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಪೊಲೀಸ್ ಠಾಣೆ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಉಮೇಶ್ ಪ್ರಭು, ಜಿಲ್ಲಾ ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯ ಉಪಸ್ಥಿತರಿದ್ದರು. ಕೃಷ್ಣಾನುಗ್ರಹ ಆಡಳಿತಾಧಿಕಾರಿ ಉದಯ ಕುಮಾರ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ನಿರೂಪಿಸಿದರು. ಕೃಷ್ಣಾನುಗ್ರಹ ಸಂಯೋಜಕಿ ಮರೀನಾ ವಂದಿಸಿದರು.

ಪ್ರಾಣಿ ಸಂಕುಲಗಳೂ ತಮ್ಮ ಮಕ್ಕಳು ಸದೃಢರಾಗುವವರೆಗೆ ಪೋಷಣೆ ಮಾಡುತ್ತವೆ. ಆದರೆ ಮನುಷ್ಯ ಮಕ್ಕಳನ್ನು ದೂರ ಮಾಡುವುದು ಖೇದಕರ. ಮಕ್ಕಳ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ತೊಟ್ಟಿಗೆ ಹಾಕದೆ ತೊಟ್ಟಿಲಲ್ಲಿ ಇಡಬೇಕು.

- ಕಾವೇರಿ, ನ್ಯಾಯಾಧೀಶೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net