

ಉಡುಪಿ: ಗೊಲ್ಲರ ಹಿಂಡಿನ ಹಿಂದೆ ಪೊಡವಿಗೊಡೆಯ ಶ್ರೀಕೃಷ್ಣ ಚಿನ್ನದ ಪಲ್ಲಕ್ಕಿ ಏರಿ ರಥಬೀದಿ ಪ್ರವೇಶಿಸಿದ ಕೃಷ್ಣ. ತಾಸೆ ಸದ್ದಿನ ಅಬ್ಬರ, ಚೆಂಡೆವಾದ್ಯಗಳ ನಾದದೊಂದಿಗೆ ಸ್ವರ್ಣರಥದಲ್ಲಿ ವಿರಾಜಮಾನ ಶ್ರೀಕೃಷ್ಣನನ್ನು ಕಂಡು ಭಕ್ತರ ಜನರಲ್ಲಿ ಧನ್ಯತೆಯ ಭಾವ……
ಗುರುವಾರ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ಸಂಪ್ರದಾಯದಂತೆ ಶ್ರೀಕೃಷ್ಣ ಲೀಲೋತ್ಸವ ನಡೆಯಿತು. ಅಪರಾಹ್ನ 3 ಗಂಟೆಗೆ ಕೃಷ್ಣಮಠದ ಒಳಭಾಗದಿಂದ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತಂದು ಶ್ರೀ ಕೃಷ್ಣ ಮಠದ ಮುಖ್ಯದ್ವಾರದ ಎದುರು ಹೂವಿನಿಂದ ಅಲಂಕರಿಸಲಾದ ಚಿನ್ನದ ರಥದಲ್ಲಿಟ್ಟು ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆರತಿ ಬೆಳಗಿದರು. ನಂತರ ಮಠದ ಮುಂಭಾ ಗೋವಳರು ಎರಡು ಮೊಸರು ಕುಡಿಕೆಗಳನ್ನು ಒಡೆದ ತಕ್ಷಣ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಎದುರಿನಲ್ಲಿ ನವರತ್ನ ರಥದಲ್ಲಿ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಮೂರ್ತಿ ಹಾಗೂ ಚಿನ್ನದ ರಥದಲ್ಲಿ ಶ್ರೀಕೃಷ್ಣ ಮೃಣ್ಮಯ ಮೂರ್ತಿ ರಥಬೀದಿಯಲ್ಲಿ ಭಕ್ತಸಾಗರದ ಮಧ್ಯೆ ನಡುವೆ ಸಾಗಿ ಬಂತು. ಚೆಂಡೆ, ವಾದ್ಯಗಳೊಂದಿಗೆ ಹುಲಿವೇಷಧಾರಿಗಳು, ತಟ್ಟಿರಾಯನ ವೇಷ, ಕಂಸನ ವೇಷಧಾರಿಗಳು ಗಮನ ಸೆಳೆದರು.
ಅನಂತೇಶ್ವರ ದೇವಸ್ಥಾನದ ಬಲಭಾಗದ ನಿರ್ಮಿಸಿದ ವೇದಿಕೆಯಲ್ಲಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಭಕ್ತರಿಗೆ ಉಂಡೆ, ಚಕ್ಕುಲಿ ಹಾಗೂ ಲಾಡು, ಫಲವಸ್ತುಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಮೆರವಣಿಗೆಗೆ ಬಳಿಕ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನಗೊಳಿಸಲಾಯಿತು. ಅವಭೃತ ಸ್ನಾನದ ಬಳಿಕ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ ನಡೆಯಿತು.
ಮುಂಜಾನೆ ಮಹಾಪೂಜೆ
ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಪ್ರಯುಕ್ತ ಕೃಷ್ಣ ದೇವರಿಗೆ ವಜ್ರಕವಚ ಅಲಂಕಾರ ಮಾಡಲಾಗಿದ್ದು, ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಹಾಪೂಜೆಯನ್ನು ನೆರವೇರಿಸಿದರು. ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿಗಳನ್ನು ಸಮರ್ಪಣೆ ಮಾಡಿದ ಬಳಿಕ ಶ್ರೀಕೃಷ್ಣ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಹುಲಿವೇಷಧಾರಿಗಳಿಗೆ ನೋಟಿನ ಮಾಲೆ
ವಿಟ್ಲಪಿಂಡಿ ಉತ್ಸವ ಮೆರವಣಿಗೆ ಮುಗಿದ ಬಳಿಕ ರಥಬೀದಿಯ ತೆಂಕಸುತ್ತಿನಲ್ಲಿ ಹಾಕಿರುವ ರಥದ ಗುತ್ತಿನ ಅನ್ನ ವಿಠಲ ವೇದಿಕೆಯಲ್ಲಿ ಹುಲಿವೇಷ ಮತ್ತು ಜಾನಪದ ನೃತ್ಯ ನಡೆಯಿತು. ಶಿರೂರು ಶ್ರೀ ವೇದವರ್ಧನತೀರ್ಥರು ವೇಷಧಾರಿಗೆ ನೋಟಿನ ಮಾಲೆ ಹಾಕಿ ಗೌರವಿಸಿದರು. ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುತ್ತದೆ.