

ಬೆಂಗಳೂರು: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಅರುಣ್ ಚೌಗುಲೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಗಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು.
ಉಡುಪಿ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ಐನಾಝ್, ಹಸೀನಾ, ಅಫ್ನಾನ್, ಅಸೀಮ್ ಎಂಬುವವರನ್ನು ಹತ್ಯೆ ನಡೆಸಿದ್ದ ಅರುಣ್ ಚೌಗುಲೆ ಅಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಯ ವಿರುದ್ಧದ ಸಾಂದರ್ಭಿಕ ಸಾಕ್ಷಿಗಳ ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳು ಇವೆ. ಅಲ್ಲದೆ, ಆರೋಪಿಯ ಕೂದಲಿನ ಡಿಎನ್ಎ ಆಧರಿಸಿ, ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣ ಹಿನ್ನೆಲೆ ಏನು?
ಉಡುಪಿ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ಐನಾಝ್, ಹಸೀನಾ, ಅಫ್ನಾನ್, ಅಸೀಮ್ ಎಂಬುವವರನ್ನು ಪ್ರವೀಣ್ ಚೌಗುಲೆ ಹತ್ಯೆ ಮಾಡಿ ಪರಾರಿಯಾಗಿದ್ದ, ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಪ್ರವೀಣ್ ಅರುಣ್ ಚೌಗಲೆ ಮತ್ತು ಅಯ್ನಾಝ್ ಕಳೆದ 8 ತಿಂಗಳಿನಿಂದ ಪರಿಚಯಸ್ಥರಾಗಿದ್ದು, ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8-10 ಬಾರಿ ವಿದೇಶಕ್ಕೆ ತೆರಳುವ ವಿಮಾನದಲ್ಲಿ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಅವಕಾಶವು ದೊರಕಿತ್ತು. ಹೀಗೆ ಅವರಿಬ್ಬರ ನಡುವೆ ಗೆಳೆತನವು ಬೆಳೆದಿತ್ತು.
ಆಕೆಗೆ ಓಡಾಟ ನಡೆಸಲು ಸಹಾಯವಾಗಲೆಂದು ಆರೋಪಿ ತನ್ನ ದ್ವಿಚಕ್ರ ವಾಹನವನ್ನು ಆಕೆಯ ಬಳಕೆಗೆ ನೀಡಿದ್ದನು. ಇತ್ತೀಚೆಗೆ ತಿಂಗಳ ಹಿಂದೆ, ಅಯ್ನಝ್ ಆರೋಪಿಯ ಜೊತೆಗಿನ ಒಡನಾಟದಿಂದ ದೂರ ಸರಿದು, ಮಾತನಾಡುತ್ತಿರಲಿಲ್ಲ. ಇದರಿಂದ ಪ್ರವೀಣ್ ತೀವ್ರ ವಿಚಲಿತನಾಗಿ ಸಿಟ್ಟಿಗೆದ್ದಿದ್ದನು. ತನ್ನ ಜೊತೆಗಿನ ಒಡನಾಟದಿಂದ ದೂರ ಸರಿದ ಅಯ್ನಾಝ್ಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮನೆಗೆ ಆ್ಯಪ್ನ ಸಹಾಯದಿಂದ ಆಗಮಿಸಿದ ಆರೋಪಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಅದೇ ವೇಳೆ ತಡೆಯಲು ಬಂದ ಆಕೆಯ ತಾಯಿ ಹಸೀನಾ, ಸಹೋದರಿ ಅಫ್ನಾನ್, ಮನೆಯ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಯ ಒಳಗೆ ಬರುತ್ತಿದ್ದ ವೇಳೆ ಆತನಿಗೂ ಚೂರಿ ಇರಿದಿದ್ದ.