

ಉಡುಪಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಪೇಸ್‌ಬುಕ್ ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿ ಪರವಾಗಿ ಜಾಹೀರಾತು ಪ್ರಕಟಿಸಲು ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ) ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮತಿ ಪಡೆಯದೇ ಜಾಹೀರಾತು ಪ್ರಸಾರ ಮಾಡುತ್ತಿರುವುದನ್ನು ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಪ್ರತ್ಯೇಕ ಕಚೇರಿಯನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ಪ್ರಸಾರವಾಗುವ ಎಲ್ಲಾ ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿನ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸಲು 3 ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, 8 ಟಿವಿ ಪರದೆಗಳ ಮೂಲಕ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅದರಲ್ಲಿ ಬರುವ ಎಲ್ಲಾ ರೀತಿಯ ಕಾರ್ಯಕ್ರಮಗಳ ಬಗ್ಗೆ ಪ್ರತ್ಯೇಕ ರಿಜಿಸ್ಟರ್‌ಗಳಲ್ಲಿ ದಾಖಲು ಮಾಡಲಾಗುತ್ತಿದೆ. ಎಂಸಿಎಂಸಿ ಯಿಂದ ಪೂರ್ವಾನುಮತಿ ಪಡೆಯದೇ ಪ್ರಸಾರವಾಗುವ ಜಾಹೀರಾತುಗಳು ಮತ್ತು ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುವ ಕಾರ್ಯಕ್ರಗಳ ಬಗ್ಗೆ ನೋಡೆಲ್ ಅಧಿಕಾರಿಗಳಿಗೆ ವರದಿ ನೀಡಲಾಗುತ್ತಿದೆ.
ಸ್ಥಳೀಯ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನು ಸಂಪೂರ್ಣ ರೆಕಾರ್ಡ್ ಆಗುವ ರೀತಿಯಲ್ಲಿ ಟಿವಿ ಗಳಿಗೆ ಡಿವಿಆರ್‌ಗಳನ್ನು ಅಳವಡಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯ ವರದಿ ಹಾಗೂ ಜಾಹೀರಾತುಗಳು ಪ್ರಸಾರವಾದಲ್ಲಿ ಅವುಗಳ ನಿರ್ದಿಷ್ಟ ಅವಧಿ ಕ್ಲಿಪಿಂಗ್‌ಗಳನ್ನು ಡಿವಿಆರ್ ನಿಂದ ತೆಗೆದು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗುತ್ತಿದೆ.
ಟಿವಿ ಚಾನೆಲ್ ಗಳು ಮಾತ್ರವಲ್ಲದೇ ಎಲ್ಲಾ ದಿನಪತ್ರಿಕೆಗಳನ್ನೂ ಪರಿಶೀಲನೆಯನ್ನು ನಡೆಸುತ್ತಿದ್ದು, ಪ್ರತಿದಿನದ ಪತ್ರಿಕಾ ವರದಿಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಕುರಿತು ನಿಗಾವಹಿಸಲು ಸಾಮಾಜಿಕ ಮಾಧ್ಯಮ ನಿರ್ವಹಣಾ ಪರಿಣಿತರ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಅವರೂ ಸಹ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.