ಅವಶ್ಯಕತೆ ಇದ್ದಾಗ ಉಡುಪಿ ಜಿಲ್ಲೆಗೆ ಖಂಡಿತ ಬರುವೆ

UDP-21-1-Laxmi
ನಿರಂತರ ಮಳೆಯಿಂದ ಕಡಲ್ಕೊರೆತ ಉಂಟಾದ ಉಡುಪಿಯ ಗುಜ್ಜರಬೆಟ್ಟು ಬೀಚ್​ಗೆ ಭೇಟಿ ನೀಡಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪರಿಶೀಲಿಸಿದರು. ಡಿಸಿ ವಿದ್ಯಾಕುಮಾರಿ, ವೆರೊನಿಕಾ ಕರ್ನೇಲಿಯೋ ಹಾಗೂ ಅಧಿಕಾರಿಗಳು ಇದ್ದರು.
Published on

ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸ್ಪಷ್ಟನೆ | ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ, ಮನೆ, ರಸ್ತೆ, ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು ಜಿಲ್ಲಾಡಳಿತ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆಯೇ ನಾನು ಸಭೆ ನಡೆಸಿ, ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಜಾಗೃತಿ ವಹಿಸಲು ತಿಳಿಸಿದ್ದೇನೆ. ಉಡುಪಿ ಜಿಲ್ಲೆಗೆ ನನ್ನ ಅವಶ್ಯಕತೆ ಇದ್ದಾಗ ಖಂಡಿತ ಭೇಟಿ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದರು.

ಉಡುಪಿಗೆ ಭಾನುವಾರ ಆಗಮಿಸಿದ್ದ ಅವರು, ಗುಜ್ಜರಬೆಟ್ಟು ಕಡಲ ಕೊರೆತ ಪ್ರದೇಶ, ಬೈಂದೂರು ತಾಲೂಕಿನ ಸೋಮೇಶ್ವರದಲ್ಲಿ ಗುಡ್ಡ ಕುಸಿತ, ಬಿಜೂರು, ಶಿರೂರು ಗ್ರಾಮದಲ್ಲಿ ಹಾನಿಗೊಂಡ ಮನೆ, ಒತ್ತಿನೆಣೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುವ ಹಂತದಲ್ಲಿರುವ ಸ್ಥಳ, ಕೋಟ, ಪಡುಬಿದ್ರಿಗೆ ತೆರಳಿ ಮಳೆಯಿಂದ ಆದ ಹಾನಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

UDP-21-1A-Laxmi
ಕಡಲ್ಕೊರೆತದಿಂದ ಮನೆಗಳಿಗೆ ನೀರು ನುಗ್ಗುವ ಆತಂಕವಿದ್ದು ಸೂಕ್ತ ಭದ್ರತೆ ನೀಡುವಂತೆ ಗುಜ್ಜರಬೆಟ್ಟು ಮೀನುಗಾರರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಮನವಿ ಮಾಡಿದರು.

ಇಲ್ಲೇ ಮನೆ ಮಾಡಲೂ ಸಿದ್ಧ

ಜಿಲ್ಲೆಯಲ್ಲಿ ನೆರೆ ಬಂದು ಜನರು ಕಷ್ಟ ಅನುಭವಿಸುತ್ತಿದ್ದರೂ ಉಸ್ತುವಾರಿ ಸಚಿವರು ಬರುತ್ತಿಲ್ಲ ಎಂಬ ಅಸಮಾಧಾನ ಕಂಡು ಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉಡುಪಿಯಲ್ಲೇ ಮನೆ ಮಾಡಿ ಇರಲು ನಾನು ತಯಾರಿದ್ದೇನೆ. ಆದರೆ, ರಾಜ್ಯದ ಸಚಿವೆಯಾಗಿ ನನಗೆ ಬಹಳಷ್ಟು ಜವಾಬ್ದಾರಿ ಇದೆ, ಅಧಿವೇಶನ ನಡೆಯುತ್ತಿದೆ. ಇಂದು ಭಾನುವಾರ ರಜೆ ಇದ್ದರೂ ಸಹ ಜನರಿಗೆ ಸಾಂತ್ವನ ಹೇಳಲು ಬಂದಿದ್ದೇನೆ. 24×7 ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚರವಾಗಿದೆ. ಯಾವ ತೊಂದರೆ ಆಗದಂತೆ ಈಗಾಗಲೇ ಹಲವು ಕ್ರಮ ಕೈಗೊಂಡಿದ್ದೇವೆ ಎಂದರು.

ಹಾನಿ ವಿವರ ಸಂಗ್ರಹಿಸಲು ಸೂಚನೆ

ಜಿಲ್ಲೆಯಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಕಡಲು ಕೊರೆತ, ಬೆಳೆ ಹಾನಿ ವಿವರ ಸಂಗ್ರಹಿಸಿ ತ್ವರಿತವಾಗಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಹೇಳಿದ್ದೇನೆ. ಹಾಳಾಗಿರುವ ರಸ್ತೆಗಳನ್ನು ಆದ್ಯತೆಯ ಮೇಲೆ ದುರಸ್ತಿ ಮಾಡಲಾಗುವುದು. ಅರಣ್ಯ ಇಲಾಖೆಗೆ ಸೂಚಿಸಿದ್ದು, ಅಪಾಯದ 500ಕ್ಕೂ ಹೆಚ್ಚು ಮರ ತೆರವು ಮಾಡಲಾಗಿದೆ. ಶಾಲೆಯ ಪಕ್ಕ ಅಪಾಯ ತರಬಹುದಾದ ತಂತಿಗಳಲ್ಲಿದ್ದಲ್ಲಿ ಕೂಡಲೇ ಸರಿಪಡಿಸಲು ಮೆಸ್ಕಾಂನವರಿಗೆ ಈ ಮೊದಲೇ ಸೂಚಿಸಿದ್ದೇನೆ. ಉಡುಪಿ ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು. ಅದನ್ನು ಸ್ವಚ್ಛಗೊಳಿಸಿದ್ದಾರೆ. ಕಾಲುಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್​ ಲೈನ್​ ಸಹ ತೆರೆಯಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಡಾ.ಕೆ.ಅರುಣಕುಮಾರ್​, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್​., ತಾಲೂಕುಗಳ ತಹಸೀಲ್ದಾರರು, ಕೆಪಿಸಿಸಿ ಸದಸ್ಯೆ ವೆರೊನಿಕಾ ಕರ್ನೇಲಿಯೋ, ಮಾಜಿ ಶಾಸಕ ಗೋಪಾಲ ಪೂಜಾರಿ, ಡಿಎಫ್​ಒ ಗಣಪತಿ, ಪಕ್ಷದ ಕಾರ್ಯಕರ್ತರು ಇದ್ದರು.

ಪರಿಹಾರದ ಆದೇಶ ಪ್ರತಿ ನೀಡಿದ್ದೇವೆ

ಬೈಂದೂರು ತಾಲೂಕಿನ ಕಡಲ ಬಳಿ ಇರುವ ಸೋಮೇಶ್ವರಕ್ಕೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಇಲ್ಲಿ ಗುಡ್ಡ ಕುಸಿತವಾಗಿದ್ದು ಆತಂಕದಲ್ಲಿರುವ ಸ್ಥಳೀಯರ ಜತೆ ಮಾತನಾಡಿದ್ದೇನೆ. ಖಾಸಗಿ ರೆಸಾರ್ಟ್​ನಿಂದ ತೊಂದರೆ ಆಗಿದ್ದಾಗಿ ತಿಳಿದುಬಂದಿದೆ. ಆದರೆ, ಅವರು ಸರ್ಕಾರದ ಎಲ್ಲ ರೀತಿಯ ಕಾಯ್ದೆ, ಕಾನೂನಿನ ಪ್ರಕಾರ ಕೆಲಸ ಮಾಡಿದ್ದಾಗಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡಿದ್ದೇನೆ. ಬಿಜೂರಿನಲ್ಲಿ ಸಂಪೂರ್ಣ ಕುಸಿತವಾದ ಮನೆಯನ್ನೂ ನೋಡಿ ಬಂದಿದ್ದೇನೆ. ಸರ್ಕಾರದ ವತಿಯಿಂದ ಪರಿಹಾರ ಆದೇಶದ ಪ್ರತಿ ನೀಡಿದ್ದು, ನಾಳೆಯೇ ಸಂತ್ರಸ್ತರ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದರು.

ಕಡಲು ಕೊರೆತ ತಡೆಗೆ 5 ಕೋಟಿ ರೂ. ಬರಲಿದೆ

ತಿಂಗಳ ಹಿಂದೆಯೇ ಕಡಲು ಕೊರತೆ ತಡೆಗೆ 5 ಕೋಟಿ ರೂ. ನೀಡುವುದಾಗಿ ಹೇಳಿದ್ದೀರಿ. ಇನ್ನೂ ಬಂದಿಲ್ಲವಲ್ಲ ಎಂಬ ಮಾಧ್ಯವದವರ ಪ್ರಶ್ನೆ ಉತ್ತರಿಸಿ, ತಕ್ಷಣ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದಷ್ಟು ಬೇಗ 5 ಕೋಟಿ ರೂ. ಬರಲಿದೆ. ಹಳೆಬಾಕಿ ಪಾವತಿಗೂ ಸಹ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು. ಮನೆಹಾನಿ ಪರಿಹಾರ ಮೊತ್ತ 5 ಲಕ್ಷದಿಂದ 1.26 ಲಕ್ಷ ರೂ.ಗೆ ಇಳಿಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಇನ್ನೂ ಗೊಂದಲ ಇದೆ. ಕಳೆದ ಬಾರಿ ಮಳೆಯಿಂದ ಮನೆ ಸಂಪೂರ್ಣ ಹಾನಿಯಾದಾಗ 5 ಲಕ್ಷ ರೂ. ಕೊಟ್ಟಿದ್ದೇವೆ. ಆದರೆ, ಈ ಬಾರಿ ಇನ್ನೂ ನನಗೆ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಏನೋ ಮಾತನಾಡಿ ನಾನು ಮತ್ತೊಂದು ಗೊಂದಲ ಸೃಷ್ಟಿಸುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಜಾರಿಕೊಂಡರು.

ಬಿಜೆಪಿಗರ ಆರೋಪಕ್ಕೆ ತಕ್ಕ ಉತ್ತರ ಕೊಡಲು ಸಿಎಂ ಸಿದ್ದರಾಮಯ್ಯ ಸಮರ್ಥರಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದು, 5 ಬಾರಿ ಬಜೆಟ್​ ಮಂಡಿಸಿದ್ದಾರೆ. ರಾಜಕಾರಣಕ್ಕಾಗಿ ಹೇಳಿಕೆ ಕೊಡುವ ಜಾಯಮಾನದವರಲ್ಲ. ಬಿಜೆಪಿಯವರು ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಿಎಂಗೆ ಪತ್ರ ಬರೆದಿದ್ದಾರಂತೆ. ಅದಕ್ಕೂ ಸಿಎಂ ತಕ್ಕ ಉತ್ತರ ಕೊಡುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್​. ಉಸ್ತುವಾರಿ ಸಚಿವೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net