

ಚಿತ್ರದುರ್ಗ: ಕೋಟೆನಗರಿಯ ರಾಜಬೀದಿಗಳಲ್ಲಿ ಕೆಳಗೋಟೆಯ ಮಾರಮ್ಮ ಮತ್ತು ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ಶಕ್ತಿದೇವತೆಗಳ ಮೆರವಣಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.
ಬುಡಕಟ್ಟು ಸಂಸ್ಕೃತಿಯ ತವರೆಂದೇ ಖ್ಯಾತಿಯಾದ ವೀರವನಿತೆ ಒನಕೆ ಓಬವ್ವಳ ನಾಡಿನಲ್ಲಿ ಮಾರಮ್ಮ ದೇವಿಯನ್ನು ಅರಾಧಿಸುವ ಅಸಂಖ್ಯಾತ ಭಕ್ತಗಣವಿದೆ. ಚಳ್ಳಕೆರೆ ತಾಲೂಕು ಗೌರಸಂದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಬಳಿಕ ಜಿಲ್ಲೆಯ ಹಲವೆಡೆ ಮಾರಮ್ಮ ದೇವಿ ಜಾತ್ರೆಯನ್ನು ಹಂತ-ಹಂತವಾಗಿ ಮಂಗಳವಾರ ದಿನದಂದು ಆಚರಿಸುತ್ತ ಬರಲಾಗಿದೆ. ಈಗಾಗಲೇ ನಗರದ ವಿವಿಧೆಡೆ ಜಾತ್ರೆ ಆಚರಿಸಲಾಗಿದ್ದು, ಉತ್ಸವಕ್ಕೆ ಕೆಳಗೋಟೆಯೂ ಕಳೆಗಟ್ಟಿದೆ.
ಈ ಬಡಾವಣೆಯಲ್ಲಿ ಬಹುಮುಖ್ಯವಾಗಿ ಎರಡು ಕಡೆ ಮಾರಮ್ಮ ದೇವಿ ದೇಗುಲವಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಮೂರು ದಿನ ವೈಭವದಿಂದ ಆಚರಿಸುವ ಪರಂಪರೆ ಇದೆ.
ಈಗಾಗಲೇ ವಿದ್ಯುತ್ ದೀಪಾಲಂಕಾರದಿಂದ ದೇವಿಯ ದೇಗುಲ, ಪ್ರಮುಖ ಬೀದಿ ಕಂಗೊಳಿಸುತ್ತಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿಯ ಅನೇಕರ ಮನೆಗಳಲ್ಲೂ ಸಂಭ್ರಮ ಮನೆ ಮಾಡಿದೆ. ಸೋಮವಾರ ಬೆಳಗ್ಗೆ ಗಂಗಾಪೂಜೆ ಸೇರಿ ವಿವಿಧ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಮೆರವಣಿಗೆಗೆ ಸಜ್ಜಾಗಲು ದೇವತೆಗಳ ಉತ್ಸವ ಮೂರ್ತಿಯನ್ನು ಅರ್ಚಕರು ಕೋಟೆ ರಸ್ತೆಯಲ್ಲಿನ ಗಾರೆಬಾಗಿಲು ಈಶ್ವರನ ಸನ್ನಿಧಾನಕ್ಕೆ ಕರೆತಂದರು. ಅಲ್ಲಿ ವೈಭವೋಪೇತವಾಗಿ ವಿವಿಧ ಬಗೆಯ ಪುಷ್ಪ, ಇತರ ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಲಾಯಿತು.
ಪುಷ್ಪಾಲಂಕೃತ ಟ್ರ್ಯಾಕ್ಟರ್‌ನಲ್ಲಿ ದೇವಿ ಮೂರ್ತಿಯನ್ನು ಕೂರಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಏಕನಾಥೇಶ್ವರಿ ದೇವಿ ಪಾದದಗುಡಿ, ಫಿಲ್ಟರ್ ಹೌಸ್ ರಸ್ತೆ, ಕರುವಿನಕಟ್ಟೆ, ಭರಮಣ್ಣನಾಯಕ, ಮದಕರಿನಾಯಕ ವೃತ್ತ, ಬಾರ್‌ಲೈನ್ ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು.
ಮೆರವಣಿಗೆ ಸಾಗಿದ ಮಾರ್ಗದಲ್ಲಿ ರಸ್ತೆಗೆ ಮಹಿಳೆಯರು ನೀರೆರೆಚುವ ಮೂಲಕ ಸ್ವಾಗತಿಸಿ, ಭಕ್ತಿ ಸಮರ್ಪಿಸಿದರು. ಕರಡಿ ಚಮ್ಮಳ, ಸೋಮನ ಕುಣಿತ, ಡೊಳ್ಳು, ಬ್ಯಾಂಡ್ ಸೆಟ್, ಉರುಮೆ ಸೇರಿ ಇತರ ಜನಪದ ಕಲಾವಿದರು ಮೆರುಗು ನೀಡಿದರು. ಭಕ್ತರ ಉಧೋ ಉಧೋ ಎಂಬ ಹರ್ಷೋದ್ಗಾರದೊಂದಿಗೆ ಸಾಗಿ ದೇಗುಲವನ್ನು ತಲುಪಿತು.
ಮಂಗಳವಾರ, ಬುಧವಾರ ವಿವಿಧ ಪೂಜಾ ಕಾರ್ಯಗಳು ನೆರವೇರಲಿದ್ದು, ಭಕ್ತರಿಂದ ಮೀಸಲು ಸಮರ್ಪಣೆ, ಪೂಜೆ ಸ್ವೀಕಾರದ ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ನಗರದ ಕೆಲವೆಡೆಯಲ್ಲೂ ಸಂಭ್ರಮ: ನಗರದ ಕೆಲವೆಡೆಗಳ ಮಾರಮ್ಮ ದೇವಿ ದೇಗುಲಗಳಲ್ಲೂ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ ದೇವಿಯ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಸೇವೆ ನಡೆಯಲಿದೆ. ದೇಗುಲಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.