

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೆರೆಡು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜತೆಗೆ ಈಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಜೋಶಿ ಹೇಳಿದ್ದಾರೆ.
ನಾಲ್ಕೈದು ದಿನಗಳ ಹಿಂದಷ್ಟೇ ಹೆಸರು ಮತ್ತು ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ರೈತರಿಗೆ ಗಣೇಶ ಹಬ್ಬದ ಕೊಡುಗೆ ನೀಡಿದೆ ಎಂದಿದ್ದಾರೆ ಸಚಿವ ಜೋಶಿ.
ಕರ್ನಾಟಕದಲ್ಲಿ 2024-25 ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 19,760 ಮೆಟ್ರಿಕ್ ಟನ್ ಉದ್ದು ಹಾಗೂ 1,03,315 ಮೆಟ್ರಿಕ್ ಟನ್ ಸೋಯಾಬಿನ್ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ ಎಂಎಸ್ಪಿ ಅಡಿಯಲ್ಲಿ ಖರೀದಿಸಿ, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 90 ದಿನಗಳ ಅವಧಿಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಸೋಯಾಬೀನ್ ಖರೀದಿಸುವಂತೆ ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಆ. 29ರಂದು ಆದೇಶ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಉದ್ದಿನ ಕಾಳು 7,400 ರೂ. ಮತ್ತು ಸೋಯಾಬಿನ್ ಗೆ 4,892 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಕಳೆದ ವರ್ಷ 6,950 ರೂ. ಇದ್ದ ಉದ್ದಿನ ಬೆಂಬಲ ಬೆಲೆ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 450 ರೂ. ಹೆಚ್ಚಳ ಕಂಡಿದೆ. 4,600 ದರವಿದ್ದ ಸೋಯಾಬಿನ್ ಬೆಂಬಲ ಬೆಲೆ ಈಗ 292 ರು. ಹೆಚ್ಚಳವಾಗಿದೆ.
ರಾಜ್ಯ ಸರ್ಕಾರ ತಕ್ಷಣವೇ ರಾಜ್ಯಾದ್ಯಂತ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿ ಹೆಸರು, ಸೂರ್ಯಕಾಂತಿ ಜತೆಗೆ ಉದ್ದು ಮತ್ತು ಸೋಯಾಬಿನ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.