ಉದ್ಭವ ಗಂಗಾಧರೇಶ್ವರ ರಥೋತ್ಸವ ವೈಭವ

27 yelandur 02
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವ ಗಂಗಾಧರೇಶ್ವರ ದೇಗುಲದ ಆವರಣದಲ್ಲಿ ಗುರುವಾರ ರಥೋತ್ಸವ ಜರುಗಿತು.
Published on

ಯಳಂದೂರು: ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿರುವ ಉದ್ಭವ ಗಂಗಾಧರೇಶ್ವರ ರಥೋತ್ಸವ ಗುರುವಾರ ವೈಭವಯುತವಾಗಿ ಜರುಗಿತು.

ವೈಷ್ಣವ ಹಾಗೂ ಶೈವ ಸಂಪ್ರದಾಯವನ್ನು ಒಳಗೊಂಡ ಐತಿಹಾಸಿಕ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿ ಮರು ದಿನ ನಡೆಯುವ ಗಂಗಾಧರೇಶ್ವರ ರಥಕ್ಕೆ ಸೋಲಿಗರೂ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಬಂದಿದ್ದ ಭಕ್ತರು ಸಾಕ್ಷಿಯಾದರು.

ಮಹಾರಾಜರ ಸ್ವರ್ಣಕೊಳಗ ಧಾರಣೆ: ಉದ್ಭವ ಲಿಂಗಕ್ಕೆ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಬಹಾದ್ದೂರ್ ಅವರು ಸ್ವಾಮಿಗೆ ಒಪ್ಪಿಸಿರುವ ಸ್ವರ್ಣ ಕೊಳಗವನ್ನು ಧಾರಣೆ ಮಾಡಲಾಗಿತ್ತು. ಮಧ್ಯಾಹ್ನ 12.20 ರಿಂದ 12.45 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ಪ್ರಭಾವಳಿಯಲ್ಲಿದ್ದ ದೇವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಜಮಾಯಿಸಿದ್ದ ಭಕ್ತರು ಹರಹರ ಮಹಾದೇವ ಜಯಘೋಷದೊಂದಿಗೆ ತೇರನ್ನು ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಸ್ವಸ್ಥಾನಕ್ಕೆ ತಂದರು. ಪ್ರಭಾವಳಿಯಲ್ಲಿ ದೇವರ ಉತ್ಸವಮೂರ್ತಿಯನ್ನು 400 ವರ್ಷಕ್ಕೂ ಹಳೆಯದಾದ ಹಿತ್ತಾಳೆಯ ಬಸವ ವಾಹನದ ಮೇಲೆ ಕೂರಿಸಿ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆಯನ್ನು ಮಾಡಲಾಯಿತು.

ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ: ದೇಗುಲದ ಮುಂಭಾಗದಲ್ಲಿರುವ ಆವರಣದಲ್ಲೇ ಪ್ರಸಾದ ವಿನಿಯೋಗ ಮಾಡಲಾಯಿತು. ಸಾವಿರಾರು ಭಕ್ತರು ಕೆಳಗೆ ಕುಳಿತುಕೊಂಡು ಪ್ರಸಾದ ಸ್ವೀಕರಿಸಿದರು. ಇದಕ್ಕೂ ಮುಂಚೆ ಪಟ್ಟಣದ ಉಪಖಜಾನೆ ಕಾರ್ಯಾಲಯದಿಂದ ಮೈಸೂರು ಮಹಾರಾಜರು ನೀಡಿರುವ ಸ್ವರ್ಣಕೊಳಗವನ್ನು ಮಂಗಳವಾದ್ಯಗಳ ಸಮೇತ ಮೆರವಣಿಗೆ ಮೂಲಕ ದೇಗುಲಕ್ಕೆ ಕೊಂಡೊಯ್ದು ಧಾರಣೆ ಮಾಡಲಾಯಿತು. ನೆರೆದಿದ್ದ ಭಕ್ತರಿಗೆ ತೇರಿನ ನಂತರ ಪ್ರಸಾದ ವಿನಿಯೋಗವನ್ನು ಮಾಡಲಾಯಿತು. ಹರಕೆ ಹೊತ್ತ ಭಕ್ತರು ದಂಡುಗೋಲು ಸೇವೆ ನೆರವೇರಿಸಿದರು. ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್, ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿ.ಪಂ. ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ನಂಜುಂಡಸ್ವಾಮಿ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ತಹಸೀಲ್ದಾರ್ ಜಯಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ಮೋಹನ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net