

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿ ಮಲ್ಲಾಪುರ ಗ್ರಾಮದಲ್ಲಿ ಉದ್ಭವ ಗಣಪತಿ ದೇವಸ್ಥಾನಕ್ಕೆ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಚಾಲನೆ ನೀಡಲಾಯಿತು.
ತಾಲೂಕಿನ ಬಕ್ರವಳ್ಳಿಯ ಮಹೇಶ್ ಶಾಸ್ತ್ರಿ ಉಸ್ತುವಾರಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಗಂಗಾಪೂಜೆ, ದೇವಾಲಯ ಪ್ರವೇಶ, ಬಲಿ ಪೂಜೆ, ವಾಸ್ತು ಹೋಮ, ಮಹಾಗಣಪತಿ ಪ್ರತಿಷ್ಠಾಪನೆ ನಡೆಯಿತು.
ಹಿಂದೆ ಪ್ರಧಾನ ಅರ್ಚಕ ವಿರೂಪಾಕ್ಷ ಸ್ವಾಮಿ ವಾಸವಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ಹುತ್ತ ಸೃಷ್ಟಿಯಾಗಿ ಗಣಪತಿಯ ರೂಪ ಮೂಡಿದ ಕಾರಣ ಕುಟುಂಬಸ್ಥರು ವಾಸವಿದ್ದ ಮನೆಯನ್ನು ತ್ಯಜಿಸಿ ಬೇರೆಡೆ ನೆಲೆಸಿದರು. ಸದ್ಯ ಗ್ರಾಮಸ್ಥರು ಒಟ್ಟು ಸೇರಿ ಗಣಪತಿ ಮೂರ್ತಿಯ ರೂಪದಲ್ಲಿ ಹುತ್ತ ಮೂಡಿಬಂದ ಸ್ಥಳದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಿದ್ದಾರೆ. ಮಲ್ಲಾಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು.