ಉದಯವಾಗಲಿ ಚೆಲುವ ಕನ್ನಡ ನಾಡು - 100ರ ಸಂಭ್ರಮ

Kannada
Published on

ಬೆಂಗಳೂರು: ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ವತಿಯಿಂದ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ಚೆಲುವ ಕನ್ನಡ ನಾಡು-100’ ಗೀತೆಯ ಶತಮಾನೋತ್ಸವ ಸಂಭ್ರಮ ಡಿ.27ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿನ ಬಿಎಂಶ್ರೀ ಪ್ರತಿಮೆ ಎದುರು ಆಚರಿಸಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಾಯಕ ಆನಂದ ಮಾದಲಗೆರೆ ಗೀತೆಯನ್ನು ಹಾಡಲಿದ್ದಾರೆ. ಈ ವೇಳೆ ಹುಯಿಲಗೋಳ ನಾರಾಯಣರಾಯರ ಮೊಮ್ಮಗಳು ಡಾ. ರಾಧ ಕುಲಕರ್ಣಿ ಅವರನ್ನು ಗೌರವಿಸಲಾಗುವುದು. ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ವಿಕಾಸ ರಂಗದ ವ.ಚ. ಚನ್ನೇಗೌಡ, ಪ್ರೊ. ಚಂದ್ರಶೇಖರ ನಾದೂರ ಇತರರು ಭಾಗವಹಿಸಲಿದ್ದಾರೆ.

ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಬಹಿರಂಗ ಸಮಾವೇಶನದಲ್ಲಿ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಹಾಡಿ ನೆರೆದಿದ್ದ ಎಲ್ಲರ ಗಮನ ಸೆಳೆದಿದ್ದರು.

1924ರಲ್ಲಿ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಮೊದಲ ಕರ್ನಾಟಕ ಏಕೀಕರಣ ಪರಿಷತ್ತಿನ ಸಮಾವೇಶ ಬೆಳಗಾವಿಯಲ್ಲೇ ನಡೆಯಿತು. ಅಲ್ಲಿಯೂ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯಿಂದಲೇ ಸಭೆ ಪ್ರಾರಂಭವಾಯಿತು. ಏಕೀಕರಣದ ಸಾರ್ವಜನಿಕ ಸಭೆಗಳಲ್ಲಿಯೂ ಅದನ್ನೇ ಹಾಡಲಾಗುತ್ತಿತ್ತು. ‘ಬಂಕಿಮಚಂದ್ರ ಚಟರ್ಜಿಯವರ ‘ವಂದೇ ಮಾತರಂ’ ಗೀತೆಯಷ್ಟೇ ಈ ಹಾಡು ಕನ್ನಡಿಗರ ಮೇಲೆ ಪರಿಣಾಮ ಬೀರಿತು. ಇದೀಗ ಗೀತೆಯ ಶತಮಾನೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net