ಉದಯನಿಧಿ ಹೇಳಿಕೆ ಅವಿವೇಕತನದಿಂದ ಕೂಡಿದೆ : ಭಾಸ್ಕರ್ ರಾವ್

Bhaskar Rao
Published on

ಮೈಸೂರು: ಸನಾತನ ಧರ್ಮ ಹಾಗೂ ಹಿಂದೂ ಧರ್ಮ ಒಂದೇ. ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಅವಿವೇಕತನದಿಂದ ಕೂಡಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಧರ್ಮಗಳಲ್ಲಿಯೂ ಅಸಮಾನತೆ, ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು. ಅದರ ಬದಲು ಧರ್ಮವನ್ನು ಹೀಗಳೆಯವುದು ಸರಿಯಲ್ಲ. ಇದು ಪ್ರತಿಯೊಬ್ಬರಿಗೂ ನೋವುಂಟು ಮಾಡುತ್ತದೆ. ಧರ್ಮದ ವಿರುದ್ಧ ಮಾತನಾಡುವುದು ಸಂವಿಧಾನ ವಿರೋಧಿಯೂ ಹೌದು. ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಪ್ರ ಸಮುದಾಯದ ಸಂಘಟನೆಗಾಗಿ ನನ್ನನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ವಿಪ್ರ ಸಮುದಾಯದಲ್ಲಿ ಶ್ರೀಮಂತರೂ ಇದ್ದಾರೆ, ಬಡವರೂ ಇದ್ದಾರೆ. ಕಡುಬಡವರನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ತರಲು ಮಹಾಸಭಾ ಪ್ರಯತ್ನ ನಡೆಸಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವಿಪ್ರ ಮಹಿಳೆಯರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಪ್ರ ಸಮುದಾಯದ ಮುಖಂಡರಾದ ಬಿ.ಆರ್. ನಟರಾಜ ಜೋಯಿಸ್, ರಘುರಾಂ ವಾಜಪೇಯಿ, ಪುಷ್ಪಾ ಅಯ್ಯಂಗಾರ್, ಎನ್. ಶ್ರೀನಿವಾಸ್, ರವೀಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net