ಹಿರೀಸಾವೆಯಲ್ಲಿ ಉಡಸಲಮ್ಮ ದೇವಿ ಉತ್ಸವ

27 HRS 01
ಹಿರೀಸಾವೆಯಲ್ಲಿ ಗ್ರಾಮದೇವತೆ ಶ್ರೀ ಉಡಸಲಮ್ಮ ದೇವಿಯ ಉತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
Published on

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಉಡಸಲಮ್ಮ ದೇವಿಯ ಹಬ್ಬದ ಪ್ರಯುಕ್ತ ಶನಿವಾರ ಉತ್ಸವ ನೆರವೇರಿತು.

ಬೆಳಗ್ಗೆ ರಂಗ ಮಂಟಪದ ಬಳಿಯಿರುವ ದೇಗುಲದಲ್ಲಿ ಅಮ್ಮನವರಿಗೆ ಅರ್ಚಕ ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ವಿವಿಧ ವಸ್ತ್ರ, ಆಭರಣ ಹಾಗೂ ಪುಷ್ಪಗಳಿಂದ ಸಿಂಗರಿಸಿ ತೆರೆದ ವಾಹನದ ಮೇಲೆ ಪ್ರತಿಪ್ಠಾಪಿಸಲಾಯಿತು. ಭಕ್ತರು ಬಲಿ ಅನ್ನವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಮೇಟಿಕೆರೆ ಬಳಿ ಇರುವ ದೇವರ ಮೂಲಸ್ಥಾನಕ್ಕೆ ಉತ್ಸವದೊಂದಿಗೆ ದೇವಿ, ಕೆಂಪರಾಯ ಹಾಗೂ ಕೆಂಚರಾಯ ಸೋಮವನ್ನು ಕರೆದೊಯ್ಯಲಾಯಿತು. ಮೂಲ ಸ್ಥಾನದಲ್ಲಿ ಉಡಸಲಮ್ಮ ಮತ್ತು ಚಿಕ್ಕಮ್ಮ ದೇವಿಗೆ ನೈವೇದ್ಯ ಅರ್ಪಿಸಲಾಯಿತು. ಸಂಜೆ ದೇವಿಯನ್ನು ಗ್ರಾಮಕ್ಕೆ ಕರೆತಂದು ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ದೇವರ ಮನೆತನದವರು ಹಾಗೂ ಹರಕೆ ಹೊತ್ತ ಭಕ್ತರು ಮಡಿಲು ಅಕ್ಕಿ ಮತ್ತು ಕಾಣಿಕೆಗಳನ್ನು ದೇವಿಗೆ ಅರ್ಪಿಸಿದರು.

ಭೂತರಾಯ ಹಾಗೂ ಕೆಂಚರಾಯ ಸೋಮನ ಕುಣಿತ ನೋಡುಗರ ಗಮನ ಸೆಳೆಯಿತು. ಸುತ್ತಮುತ್ತಲ ಗ್ರಾಮಗಳಿಂದ ದೇವರ ಮನೆತನದವರು ಪಾಲ್ಗೊಂಡು ಉತ್ಸವವನ್ನು ವೈಭವದಿಂದ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net