ಎಲ್ಲ ನಾಗರಿಕರು ಒಂದೇರೀತಿ ಬದುಕಲು ಯುಸಿಸಿ ಅಗತ್ಯ

Book released by guests.
Published on

ಹೊನ್ನಾವರ: ಈ ದೇಶದ ಎಲ್ಲಾ ನಾಗರಿಕರು ಒಂದೇ ರೀತಿಯಲ್ಲಿ ಬದುಕುವುದಕ್ಕೆ ಅವಕಾಶ ಕಲ್ಪಿಸುವುದು ಏಕರೂಪ ನಾಗರಿಕ ಸಂಹಿತೆಯ(ಯುಸಿಸಿ) ಉದ್ದೇಶವಾಗಿದೆ.

ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವು ಕೈಜೋಡಿಸಿದಾಗ ಮಾತ್ರ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಗೊಳ್ಳಲು ಸಾಧ್ಯವಾಗುವುದು ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು.

ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಆಯೊಜಿಸಿದ್ದ ‘ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಬಿಡುಗಡೆ ಹಾಗೂ ಏಕರೂಪ ನಾಗರಿಕ ಸಂಹಿತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವರು ದುಡಿಯುವುದು ಮತ್ತು ಕೆಲವರು ದುಡಿಯದೇ ತಿನ್ನುವುದು ಆಗುವ ರೀತಿಯಲ್ಲಿ ಇಂದಿನ ವ್ಯವಸ್ಥೆಯಿದೆ. ನಮ್ಮ ದೇಶದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಇದೆ.

ಮದುವೆ ಮುಂತಾದ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಹಿಂದೂ, ಜೈನ, ಬೌದ್ದ ಧರ್ಮಗಳಿಗೆ ಒಂದು ಕಾನೂನಾಗಿದ್ದರೆ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಯಹೂದಿಗಳಿಗೆಬೇರೆ ರೀತಿಯ ಕಾನೂನುಗಳಿವೆ.

ಇದರಿಂದ ವಿಭಿನ್ನವಾದ ಸೌಲಭ್ಯಗಳು ಮತ್ತು ಅಸ್ವಾಭಾವಿಕ ಜೀವನ ಶೈಲಿಗಳು ನೆಲೆಯೂರಲು ಕಾರಣವಾಗಿದೆ. ಏಕರೂಪ ನಾಗರಿಕ ಸಂಹಿತೆಯಿಂದ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗುವುದು. ಇದಕ್ಕೆ ಎರಡೂ ಸರ್ಕಾರ ಸಮ್ಮತಿ ಸೂಚಿಸಬೇಕಾಗಿದೆ ಎಂದರು.

‘ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಪರಿಚಯಿಸಿ ಪ್ರಾಂಶುಪಾಲ ಡಾ. ಜಿ.ಎಸ್.ಹೆಗಡೆ ಮಾತನಾಡಿ, ‘ಎಲ್ಲ ರಾಜಕಾರಣಿಗಳಂತಲ್ಲ ಜಗನ್ನಾಥ ರಾವ್ ಅವರು. ಹಲವು ಏಳುಬೀಳುಗಳ ನಡುವೆ ದೇಶ ಗುರುತಿಸುವ ವ್ಯಕ್ತಿಯಾಗಿ ಅವರು ಬೆಳೆದರು.

ಅವರು ಉತ್ತಮ ಭಾಷಣಕಾರರಾಗಿದ್ದರು, ಜೊತೆಗೆ ಅವರ ಜೀವನವೂ ಇತರರಿಗೆ ಮಾದರಿಯಾದುದು. ಲೇಖಕರಾದ ತಿಮ್ಮಣ್ಣ ಭಟ್ ಅವರು ಬರೆದ ಜಗನ್ನಾಥ ರಾವ್ ಜೋಶಿ ಅವರ ಜೀವನ ಕುರಿತ ಪುಸ್ತಕವನ್ನು ಅಯೋಧ್ಯ ಪ್ರಕಾಶನವು ಪ್ರಕಟಿಸಿದ್ದು, ಎಲ್ಲರೂ ಜಗನ್ನಾಥ ರಾವ್ ಅವರ ಆದರ್ಶಪ್ರಾಯವಾದ ಜೀವನ ಶೈಲಿಯನ್ನು ಅರಿಯಲು ಅವಕಾಶ ದೊರೆತಿದೆ ಎಂದರು.

ಶಾಸಕ ದಿನಕರ ಶೆಟ್ಟಿ ‘ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಬಿಡುಗಡೆಗೊಳಿಸಿದರು.

ಶರಾವತಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ವಿ.ಭಟ್, ಸವೋತ್ತಮ ನಾಯ್ಕ ಉಪಸ್ಥಿತರಿದ್ದರು. ರಾಜೇಶ ಭಂಡಾರಿ ಸ್ವಾಗತಿಸಿದರು. ವೆಂಕಟೇಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಸಂಜೀವ ಶೇಟ್ ಧನ್ಯವಾದ ಸಮರ್ಪಿಸಿದರು. ವಿಶ್ವನಾಥ ನಾಯಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net