

ಬೆಳಗಾವಿ: ನೂತನವಾಗಿ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮತ್ತು ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿನಂದಿಸಿ, ಶುಭ ಹಾರೈಸಿದರು.
ನವದೆಹಲಿಯಲ್ಲಿ ಗುರುವಾರ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ವಿಚಾರವಾಗಿ ಚರ್ಚಿಸಿದರು. ಸಚಿವ ವಿ. ಸೋಮಣ್ಣ ಅವರೊಂದಿಗೆ ಮಾತನಾಡಿದ ಡಾ. ಪ್ರಭಾಕರ ಕೋರೆ, ಬೆಳಗಾವಿ-ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ಒಂದೇ ಭಾರತ ಎಕ್ಸಪ್ರೆಸ್ ರೈಲನ್ನು ಪುನರಾರಂಭಿಸಬೇಕು. ಬೆಳಗಾವಿ-ಪುಣೆ ಮಧ್ಯದಲ್ಲಿ ವಿಶೇಷ ರೈಲು ಪ್ರಾರಂಭಿಸಬೇಕು. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ತ್ರಿವಳಿ ನಗರಗಳ ಆರ್ಥಿಕಾಭಿವೃದ್ಧಿಗೆ ಪೂರಕವಾಗಿರುವ ಬೆಳಗಾವಿ-ಧಾರವಾಡ ರೈಲ್ವೆ ಯೋಜನೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ, ಎಲ್ಲ ವಿಷಯಗಳ ಕುರಿತು ಮಾಹಿತಿ ಪಡೆದು ಶೀಘ್ರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.