ಹಾವೇರಿ: ನಗರದ ಗ್ರಾಹಕರೊಬ್ಬರು ತಮ್ಮ ಕಾರಿಗೆ ಅಳವಡಿಸಿದ್ದ ಹೊಸ ಟೈರ್‌ಗಳಿಗೆ ಉಬ್ಬು ಬಂದಿದ್ದು, ಐದು ವರ್ಷಗಳ ವಾರಂಟಿ ಇದ್ದರೂ ಬದಲಾಯಿಸಿಕೊಡದ ಹಾವೇರಿಯ ಟೈರ್ ಅಂಗಡಿಯೊಂದಕ್ಕೆ ಟೈರ್ ಖರೀದಿ ಮೊತ್ತ ಹಾಗೂ ದಂಡ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನಗರದ ಶಂಭಣ್ಣ ಹೇಮಣ್ಣ ಜತ್ತಿ 2019 ಮೇ 21ರಂದು ತಮ್ಮ ಕಾರಿಗೆ ನಗರದ ಟೈರ್‌ಗಳನ್ನು ಖರೀದಿಸಿದ್ದರು. ಟೈರ್‌ಗಳ ಜೋಡಣೆ, ಅಲೈನ್‌ಮೆಂಟ್ ಬ್ಯಾಲೆನ್ಸಿಂಗ್ ಮತ್ತು ವೇಟ್ ಹಾಗೂ ಟೂಬ್‌ಲೆಸ್ ವಾಲ್ ಶುಲ್ಕ ಸೇರಿ ಒಟ್ಟು 15,025 ರೂ. ಪಾವತಿಸಿದ್ದರು. ಈ ಟೈರ್‌ಗಳಿಗೆ ಐದು ವರ್ಷಗಳ ವಾರಂಟಿ ನೀಡಲಾಗಿತ್ತು.
ಕಾರಿಗೆ ಟೈರ್ ಅಳವಡಿಸಿಕೊಂಡು ಹೋಗುವಾಗ ರಸ್ತೆಯಲ್ಲಿ ಕಾರು ಸರಿಯಾಗಿ ಚಲಿಸದೇ ಅಲುಗಾಡುತ್ತಿತ್ತು. ಹಾಗಾಗಿ, ಬೇರೆ ಅಂಗಡಿಯೊಂದರಲ್ಲಿ ಹಲವು ಬಾರಿ ವ್ಹೀಲ್ ಅಲೈನ್‌ಮೆಂಟ್ ಮಾಡಿಸಲಾಗಿತ್ತು. ಆದರೆ, ಟೈರ್‌ಗಳಿಗೆ ಉಬ್ಬು ಬಂದ ಕಾರಣ ಎಲ್ಲ ಟೈರ್ ಬದಲಾಯಿಸಿದರೆ ಮಾತ್ರ ಕಾರು ಸರಿಯಾಗಿ ಚಲಿಸುತ್ತದೆ ಎಂದು ಮೇಸ್ತ್ರಿ ತಿಳಿಸಿದ್ದರು.
ಟೈರ್ ವಾರಂಟಿ ಅವಧಿ ಇರುವ ಕಾರಣ ಟೈರ್ ಬದಲಾಯಿಸಿ ಕೊಡುವಂತೆ ಶಂಭಣ್ಣ, ಎಂಟರ್‌ಪ್ರೈಸಸ್‌ನವರಿಗೆ ವಿನಂತಿಸಿದ್ದರು. ಇದಕ್ಕೆ ಅವರು ಸ್ಪಂದಿಸದಿದ್ದಾಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಎಸ್. ಹಿರೇಮಠ ನೇತೃತ್ವದ ತಂಡ ಕಾರಿನ ಟೈರ್ ಖರೀದಿಗಾಗಿ ಪಾವತಿಸಿದ್ದ 15,025 ರೂ. ಮೊತ್ತವನ್ನು 30 ದಿನದೊಳಗಾಗಿ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಪಾವತಿಸಲು ಆದೇಶಿಸಿದೆ. ಮಾನಸಿಕ ಮತ್ತು ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಹಾಗೂ ಆರ್ಥಿಕ ನಷ್ಟಕ್ಕಾಗಿ ಎರಡು ಸಾವಿರ ರೂ. ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.