

ಮೈಸೂರು; ಮೈಕ್ರೊ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿತ ಬ್ಯಾಂಕಿಂಗ್ ವಲಯದ ವ್ಯಾಪ್ತಿಗೆ ತರಬೇಕು. ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳನ್ನು ಅನಿಯಂತ್ರಿತ ಮೈಕ್ರೊ ಫೈನಾನ್ಸ್‌ಗಳ ದೌರ್ಜನ್ಯದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
2022ರ ಮಾಸ್ಟರ್ ಸರ್ಕುಲ್ಯರ್ ಅನ್ನು ಹಿಂತೆಗೆದುಕೊಳ್ಳಬೇಕು. ಸಾಲ ನೀಡಿಕೆ ಆದ್ಯತಾ ವಲಯದ ವ್ಯಾಪ್ತಿಯಿಂದ ಬ್ಯಾಂಕೇತರ ಮೈಕ್ರೊ ಫೈನಾನ್ಸ್ ಸಂಸ್ಥೆಗಳನ್ನು ತೆಗೆದುಹಾಕಬೇಕು. ಖಾಸಗಿ ಸಾಲದಾತರು ವಿಧಿಸುವ ಬಡ್ಡಿ ದರವನ್ನು ಶೇ.12ಕ್ಕೆ ಮಿತಿಗೊಳಿಸಬೇಕು. ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳು ಆದ್ಯತಾ ವಲಯದ ಸಾಲ ನೀಡಿಕೆಯನ್ನು ಹೆಚ್ಚಿಸುವಂತೆ ಮತ್ತು ಬಡ್ಡಿದರವನ್ನು ಶೇ.4ರಿಂದ (ಸರ್ಕಾರದ ಸಬ್ಸಿಡಿಯೊಂದಿಗೆ) ಶೇ.9ರ ಮಿತಿಯಲ್ಲಿ ಇರಿಸುವಂತೆ ಆದೇಶ ನೀಡಬೇಕು ಎಂದು ಆರ್‌ಬಿಐ ಅನ್ನು ಒತ್ತಾಯಿಸಿದರು.
ಕೋವಿಡ್ ಸಾಂಕ್ರಾಮಿಕ ಹಾಗೂ ವ್ಯಾಪಕ ನಿರುದ್ಯೋಗದ ಹಿನ್ನೆಲೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಮೈಕ್ರೊ ಫೈನಾನ್ಸ್‌ಗಳು ಮತ್ತು ಕಿರು ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಆದ್ಯತಾ ರಂಗದ ಸಾಲ ನೀಡಿಕೆ ನಿಯಮ ತಿದ್ದುಪಡಿ ಮಾಡಿ ಶೇ.30ರಷ್ಟು ಸಾಲವನ್ನು ನೇರವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಆದ್ಯತಾ ರಂಗದ ಅಡಿಯಲ್ಲಿ ಬರುವ ಎಲ್ಲ ವಿಭಾಗಗಳಲ್ಲೂ ಶೇ.30ರಷ್ಟು ಸಾಲವನ್ನು ಮಹಿಳೆಯರಿಗೆ ನೀಡಬೇಕು. ಈ ಬಗ್ಗೆ ಒಕ್ಕೂಟ ಸರ್ಕಾರ ಕಾರ್ಯನೀತಿ ರೂಪಿಸಬೇಕು. ಸರ್ಕಾರದ ಬೇರೆ ಬೇರೆ ಯೋಜನೆಗಳಲ್ಲಿ ಶೇ.30ರಷ್ಟು ಫಲಾನುಭವಿಗಳು ಮಹಿಳೆಯರೇ ಆಗಿರಬೇಕು ಎಂದು ಈಗಾಗಲೇ ಇರುವ ನಿಯಮದ ರೀತಿಯಲ್ಲೇ ಇದನ್ನೂ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಮೈಕ್ರೊ ಮತ್ತು ಸಣ್ಣ ಸಾಲ ನೀಡಿಕೆ ಸಂಸ್ಥೆಗಳು ನೀಡುವ 10 ಲಕ್ಷ ರೂ. ವರೆಗಿನ ಸಾಲಗಳಲ್ಲಿ ಶೇ.30ರಷ್ಟು ಸಾಲವನ್ನು ಮಹಿಳೆಯರಿಗೆ ಮೀಸಲಿಡಬೇಕು. ಮಾರಾಟ, ಅನೌಪಚಾರಿಕ ವಲಯ ಮತ್ತು ಗೃಹ ಆಧಾರಿತ ವಹಿವಾಟಿನಲ್ಲಿ ತೊಡಗಿರುವ ಮಹಿಳೆಯರನ್ನೂ ಈ ವ್ಯಾಖ್ಯಾನದಲ್ಲಿ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಮೂಲಕ ಆರ್‌ಬಿಐಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಮುಖಂಡರಾದ ದೇವಿ, ಸುಶೀಲ, ಕೆ.ಸಿ.ಆಶಾ ಇತರರು ಇದ್ದರು.