

ಮಡಿಕೇರಿ: ಟೈಲರ್ ವೃತ್ತಿಬಾಂಧವರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದ ಚೌಕಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಜಿಲ್ಲಾಡಳಿತ ಭವನ ತಲುಪಿತು. ಕ್ಷೇಮ ನಿಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಸ್.ಸಿ.ನಂದೀಶ್, ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕು. ಭವಿಷ್ಯನಿಧಿ ಪಿಂಚಣಿ ಹಾಗೂ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಮಾಸಿಕ ೩ ಸಾವಿರದವರೆಗೆ ನಿವೃತ್ತಿ ವೇತನ ನೀಡಬೇಕು. ವಸತಿ ಉದ್ದೇಶಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಹೊಲಿಗೆ ಕೆಲಸಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿವಾಹ ಧನ, ಹೆರಿಗೆ ಭತ್ಯೆ ನೀಡಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಶೇಕ್ ಅಹಮ್ಮದ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ್, ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.