

ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಿಸಿದ ಬಳಿಕ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿದ್ದ ಟೈಲರ್‌ಗಳ ಬದುಕು ಮೂರಾಬಟ್ಟೆಯಾಗಿದೆ.
ವಂಶಪಾರಂಪರ್ಯ ವೃತ್ತಿಯಾಗಿ ಸ್ವೀಕರಿಸಿರುವ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ತಮ್ಮ ಜೀವನಾಧಾರಕ್ಕಾಗಿ ಬಟ್ಟೆ ಹೊಲಿಯುವುದನ್ನು ಕಾಯಕವನ್ನಾಗಿಸಿಕೊಂಡ ಇತರ ಸಮುದಾಯದವರು ಈಗ ಆದಾಯವಿಲ್ಲದೆ ಪರದಾಡುವಂತಾಗಿದೆ.
ಆರ್ಥಿಕವಾಗಿ ತಕ್ಕಮಟ್ಟಿಗೆ ಇರುವವರು ನಿರಾಳವಾಗಿದ್ದರೆ, ಕೆಲವರು ತಮ್ಮಲ್ಲಿರುವ ಬಟ್ಟೆ ಹೊಲಿದು ಉಚಿತವಾಗಿ ಹಂಚುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದಾರೆ. ಆದರೆ, ಬಾಡಿಗೆ ಕಟ್ಟಡದಲ್ಲಿ ಬಟ್ಟೆ ಅಂಗಡಿಯ ಕಟ್ಟೆಯ ಮೇಲೆ ವೃತ್ತಿ ನಡೆಸುತ್ತಿದ್ದವರ ಬದುಕೀಗ ಮುಳ್ಳಿನ ಹಾಸಿಗೆಯಂತಾಗಿದೆ. ಅವರಲ್ಲಿ ಕೆಲವರು ಅಳಿದುಳಿದ ಬಟ್ಟೆಗಳಿಂದ ಮಾಸ್ಕ್ ಸಿದ್ಧಪಡಿಸಿ ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಿದ್ದು ಒಂದಿಷ್ಟು ಆಸರೆಯಾಗಿತ್ತು. ಆದರೆ, ಲಾಕ್‌ಡೌನ್
ಐದು ವಾರ ಕಳೆದಿದ್ದು, ಇದೀಗ ನಿರುದ್ಯೋಗಿಗಳಾಗಿದ್ದಾರೆ.
ಸವಾಲಾಯ್ತು ಜೀವನ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿನ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಜಿಲ್ಲಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬಟ್ಟೆ ಹೊಲಿಯುವ ಕಾಯಕ ಮಾಡುತ್ತಿದ್ದಾರೆ. ಅದರ ಆದಾಯವೇ ಬದುಕಿನ ಬಂಡಿ ಸಾಗಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿ ಟೈಲರ್ ಶಾಪ್ ಇಟ್ಟುಕೊಂಡವರಿಗೆ ಬಾಡಿಗೆ ಕಟ್ಟುವುದು ಜತೆಗೆ ಜೀವನ ಸಾಗಿಸುವುದು ಸವಾಲಾಗಿ ಪರಿಣಮಿಸಿದೆ.
ಮ್ಯಾಚಿಂಗ್ ಸಮಸ್ಯೆ: ಸಾಮಾಜಿಕ ಅಂತರ ಕಾಯ್ದುಕೊಂಡು ಬಟ್ಟೆ ಹೊಲಿಯಲು ಮುಂದಾಗಿರುವ ಟೈಲರ್‌ಗಳ ಮನೆಗೆ ಬಟ್ಟೆ ಹೊಲಿಯಲು ತಂದು ಕೊಟ್ಟರೂ ಅದನ್ನು ಹೊಲಿಯಲು ಬೇಕಾಗುವ ಮ್ಯಾಚಿಂಗ್ ದಾರ, ಕ್ಯಾನ್‌ವಾಸ್, ಗುಂಡಿ (ಬಟನ್), ಜಿಪ್, ರವಿಕೆಗೆ ಲೈನಿಂಗ್ ಮತ್ತಿತರ ಸಾಮಗ್ರಿಗಳು ಬೇಕು. ಆದರೆ, ಇವೆಲ್ಲವೂ ಲಭ್ಯವಾಗುತ್ತಿದ್ದ ಅಂಗಡಿಗಳೂ ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿವೆ ಎಂಬುದು ವೃತ್ತಿ ಅವಲಂಬಿಸಿರುವವರ ಅಳಲು.
ಹೊಲಿದ ಬಟ್ಟೆ ಒಯ್ಯಲೂ ಜನರು ಬರುತ್ತಿಲ್ಲ: ಟೈಲರ್ ವೃತ್ತಿ ಅವಲಂಬಿಸಿರುವ ಕುಟುಂಬಗಳಲ್ಲಿ ಅನಾರೋಗ್ಯದ ಸಮಸ್ಯೆಯೂ ಇದ್ದು, ಉದ್ಯೋಗವಿಲ್ಲದೆ ಔಷಧ ವೆಚ್ಚವನ್ನೂ ಭರಿಸಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಕೈ ತುಂಬ ಕೆಲಸ ಇರುತ್ತಿದ್ದ ಮಳೆಗಾಲಕ್ಕೂ ಮುನ್ನ ನಾಲ್ಕು ಕಾಸು ಗಳಿಸುತ್ತಿದ್ದ ಈ ಸಂದರ್ಭದಲ್ಲಿ ಕರೊನಾ ಸೋಂಕು ವಕ್ಕರಿಸಿದೆ. ಇದರಿಂದ ಮದುವೆ, ಗೃಹ ಪ್ರವೇಶ ಸೇರಿದಂತೆ ಮತ್ತಿತರ ಶುಭ ಸಮಾರಂಭಗಳೂ ರದ್ದಾಗಿದ್ದು ಹೊಸ ಬಟ್ಟೆ ಹೊಲಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ಗಂಟೆಗಳ ಲೆಕ್ಕ ಹಾಕುತ್ತ ದಿನ ದೂಡುತ್ತಿದ್ದಾರೆ.
ಹಿಂದೆ ಗ್ರಾಹಕರು ನೀಡಿದ್ದ ಬಟ್ಟೆ ಹೊಲಿದಾಗಿದ್ದರೂ ಸಿದ್ಧಗೊಂಡ ಅವುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗಲು ಗ್ರಾಹಕರಿಗೂ ಬರಲಾಗುತ್ತಿಲ್ಲ. ನಾವೇ ತಂದು ಕೊಡುತ್ತೇವೆ ಎಂದರೂ ಗ್ರಾಹಕರು, ‘ಇದೀಗ ಬಟ್ಟೆಯ ಅವಸರವಿಲ್ಲ, ಕರೊನಾ ವೈರಸ್ ಹಾವಳಿ ಮುಗಿದ ಮೇಲೆ ನಾವೇ ಬಂದು ಒಯ್ಯುತ್ತೇವೆ’ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಖಾಸಬಾಗದ ಶಿವಾಜಿ ಟೈಲರ್.