

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿರುವ ಕ್ರೀಡೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ತ್ಯಾಮಗೊಂಡ್ಲು ಗ್ರಾಪಂ ಅಧ್ಯಕ್ಷ ಟಿ.ಎಚ್.ಮಲ್ಲೇಶ್ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಹೋಬಳಿಹಂತದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಏಕಾಂಗಿತನ ಕಡಿಮೆಯಾಗಿ ಜೀವನದಲ್ಲಿ ಉತ್ಸಾಹ ಮೂಡಲಿದೆ. ಇದರಿಂದ ಪಾಠ ಪ್ರವಚನಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ತೀರ್ಪುಗಾರರು ಕೂಡ ಪಕ್ಷಪಾತ ಮಾಡದೆ, ಅರ್ಹರ ಪರವಾಗಿ ತೀರ್ಪು ನೀಡಬೇಕು. ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಬಹುಮಾನ ಗೆಲ್ಲುವ ಶಾಲೆಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಕ್ರೀಡಾಕೂಟ ಆರಂಭಕ್ಕೂ ಮುನ್ನ ಜ್ಞಾನಧಾಮ ಶಾಲೆಯ ಮಕ್ಕಳ ವಾದ್ಯವೃಂದ ಸಹಿತ ಪಥಸಂಚಲನ ಗಮನ ಸೆಳೆಯಿತು. ದೊಡ್ಡಬೆಲೆ, ಮಣ್ಣೆ, ಭೈರನಾಯಕನಹಳ್ಳಿ, ಕೆಪಿಎಸ್ ತ್ಯಾಮಗೊಂಡ್ಲು, ಜ್ಞಾನಧಾಮ, ನಿಸರ್ಗ ವಿದ್ಯಾನಿಕೇತನ, ಅಕ್ಷರ, ಸಿ.ವಿ.ರಾಮನ್ ಪಬ್ಲಿಕ್ ಶಾಲೆ, ವೀಣಾ ಮಕ್ಕಳ ಮಂದಿರ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಗ್ರಾಪಂ ಸದಸ್ಯರಾದ ಮಹಿಮಣ್ಣ, ಟಿ.ಎನ್.ನಾಗೇಂದ್ರ, ಉಪ ಪ್ರಾಂಶುಪಾಲ ಎಚ್.ಮಂಜುನಾಥ್, ತಾಲೂಕು ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ್, ಇಸಿಒ ರಂಗನಾಥ್, ಸಿಆರ್‌ಪಿ ಸುಕನ್ಯಾ, ಗಿರೀಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಟಿ.ಎನ್.ಹನುಮಂತರಾಜು, ಷಫಿ, ಅರುಣ್, ಡೇರಿ ನಾಗರಾಜ್, ದೈಹಿಕ ಶಿಕ್ಷಕರಾದ ಯರ‌್ರಪ್ಪ, ಮಂಜುನಾಥ್, ಅಭಿಷೇಕ್ ಇದ್ದರು.