

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಕಂದಾಯ ಇಲಾಖೆಯ ಎಲ್ಲ ಸೇವೆಗಳು ಡಿಜಿಟಲೀಕರಣಗೊಂಡಿರುವುದರಿಂದ ಸಾರ್ವಜನಿಕರ ಕೆಲಸ ಸುಲಭವಾಗಿದೆ. ಅಧಿಕಾರಿಗಳು ಹೆಚ್ಚಿನ ಕೆಲಸವಿದೆ, ಒತ್ತಡವಿದೆ ಎನ್ನುವ ಸಬೂಬು ಹೇಳದೆ ಸಮರ್ಪಕವಾಗಿ ಸೇವೆ ಒದಗಿಸಬೇಕು ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.
ಪಟ್ಟಣದ ನಾಡಕಚೇರಿಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿ, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಉಪ ತಹಸೀಲ್ದಾರ್ ಜತೆ ಸಭೆ ನಡೆಸಿ ಮಾತನಾಡಿದರು.
ಗ್ರಾಮ ಲೆಕ್ಕಾಧಿಕಾರಿಗಳು ಮುಖ್ಯ ಕೇಂದ್ರದಲ್ಲೇ ಇದ್ದು, ಕೆಲಸ ನಿರ್ವಹಿಸಬೇಕು. ಈ ಬಗ್ಗೆ ಸಾರ್ವಜನಿಕವಾಗಿ ದೂರುಗಳು ಬಂದಿವೆ. ಅಧಿಕಾರಿಗಳು ಕೇಂದ್ರದಲ್ಲಿ ಇಲ್ಲದಿರುವುದು ರುಜುವಾತಾದರೆ ಅಂಥವರ ಮೇಲೆ ಕ್ರಮ ನಿಶ್ಚಿತ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿದ್ದು, ತ್ಯಾಮಗೊಂಡ್ಲು ಹೋಬಳಿಯ ಗ್ರಾಮಸ್ಥರು ಆಧಾರ್ ತಿದ್ದುಪಡಿಗೆ ಸೋಂಪುರ ಅಥವಾ ನೆಲಮಂಗಲಕ್ಕೆ ಹೋಗಬೇಕಿದೆ. ಇದಕ್ಕಾಗಿ ಸಾರ್ವಜನಿಕರು ಇಡೀ ದಿನ ಮೀಸಲಿಡಬೇಕಾಗಿದೆ. ಹಣ ಮತ್ತು ಸಮಯ ಎರಡು ವ್ಯಯವಾದರೂ ಕೆಲಸವಾಗುತ್ತಿಲ್ಲ. ಶೀಘ್ರ ವ್ಯವಸ್ಥೆ ಸರಿಪಡಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್.ಹನುಮಂತರಾಜು ಮನವಿ ಮಾಡಿದರು.
ಕೆಲವೇ ದಿನಗಳಲ್ಲಿ ಆಧಾರ್ ತಿದ್ದುಪಡಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ತ್ಯಾಮಗೊಂಡ್ಲು ಗ್ರಾಮದ ರೈತರ ಜಮೀನು ಗುರುತಿಸಲು ದಿಶಾಂಕ್ ಬಳಸಲು ಹೋದರೆ ಬಹಳ ತಪ್ಪುಗಳಾಗುತ್ತಿದೆ. ಸರ್ವೆ ಇಲಾಖೆಗೆ ಈ ಬಗ್ಗೆ ದೂರು ನೀಡಿದರೂ ಈವರೆಗೆ ಸರಿಯಾಗಿಲ,್ಲ ಕೂಡಲೇ ಕ್ರಮ ಕೈಗೊಂಡು ರೈತರ ಬವಣೆ ನೀಗಿಸಬೇಕು ಎಂದು ಗ್ರಾಪಂ ಸದಸ್ಯ ಮಹಿಮಣ್ಣ ಮನವಿ ಮಾಡಿದರು.
ತಹಸೀಲ್ದಾರ್ ಕೆ.ಅರುಂಧತಿ ಅವರಿಗೆ ನೆಲಮಂಗಲ ಸರ್ವೇ ಇಲಾಖೆಯ ಎಡಿಎಲ್‌ಆರ್ ಅವರಿಂದ ವರದಿ ತರಿಸಿ ಕಳುಹಿಸಲು ಡಿಸಿ ಸೂಚಿಸಿದರು. ಇದೇ ವೇಳೆ ನಾಡಕಚೇರಿ ಕಟ್ಟಡ ವೀಕ್ಷಿಸಿ ನೀರು ಮತ್ತು ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಪಡೆದು, ಸಭಾಂಗಣ ನಿರ್ಮಿಸಲು ಲಭ್ಯವಿರುವ ಅನುದಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಉಪ ತಹಸೀಲ್ದಾರ್ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕರಾದ ರವಿಕುಮಾರ್, ಮಹೇಶ್ ಕುಮಾರ್, ಅಶ್ವಥ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಪಾರ್ಥಸಾರಥಿ, ವಾಸು,ಬಸವಮೂರ್ತಿ, ಆಕಾಶ್ ಗಾಯಕ್ವಾಡ್, ಸಂಪತ್, ರಂಗಸ್ವಾಮಿ, ನಾಗರತ್ನ, ಕೃಪಾ, ವರ್ಷಿತಾ, ನಾಜಿಯಾ ಅಂಜುಮ್, ಸಿಬ್ಬಂದಿ ದೇವರಾಜ್, ಮುನಿರಾಜು, ಬೈಲಮ್ಮ, ಸಿದ್ದರಾಜು, ಶಿವಕುಮಾರ್ ಇತರರು ಇದ್ದರು.