

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಆಧಾರಸ್ತಂಭವಾಗಿ ಮತ್ತು ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕ ಮನೋಭಾವ ಬೆಳಸುವಲ್ಲಿ ತ್ಯಾಗರಾಜರ ಕೊಡುಗೆ ಅನನ್ಯ ಎಂದು ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಬಣ್ಣಿಸಿದರು.
ಸದ್ಗುರು ಶ್ರೀತ್ಯಾಗರಾಜರ 177ನೇ ಆರಾಧನಾ ಅಂಗವಾಗಿ ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಮೈಸೂರು ಬ್ರಾಹ್ಮಣ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ಧಾರ್ಮಿಕತೆಯ ಭಕ್ತಿ ಮೂಡಲು ತ್ಯಾಗರಾಜರ ಕೀರ್ತನೆಗಳು ಪ್ರಮುಖ ಪಾತ್ರವಹಿಸಿವೆ. ತ್ಯಾಗರಾಜರು ಶ್ರೀರಾಮದೇವರ ಪ್ರೇರಣೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಪಂಚರತ್ನ ಕೀರ್ತನೆ ಸೇರಿದಂತೆ ಸಾವಿರಾರು ಕೀರ್ತನೆಗಳ ವಾಗ್ಮೇಯಕಾರರಾದರು ಎಂದು ಬಣ್ಣಿಸಿದರು.
ಆರಾಧ್ಯದೈವ ಶ್ರೀರಾಮನ ಪ್ರೇರಣೆಯಿದ್ದರೆ ಮಾತ್ರ ಕೀರ್ತನೆ ಹಾಡುಗರಿಕೆ ಪ್ರಾರಂಭಿಸುತ್ತಿದ್ದರು. ತ್ಯಾಗರಾಜರು ಇಂದಿನ ಕಲಾವಿದರಿಗೆ ಆದರ್ಶ. ತಮಿಳುನಾಡಿನ ರಾಜನೊಬ್ಬ ತ್ಯಾಗರಾಜರನ್ನು ಆಹ್ವಾನಿಸಿ ಆಸ್ಥಾನದಲ್ಲಿ ಹಾಡಬೇಕೆಂದು ಹಣ, ಜಮೀನು ಕೊಡುತ್ತೇನೆ ಎಂದು ಪಟ್ಟುಹಿಡಿದರರು. ಆದರೆ ಯಾವುದೇ ಆಮಿಷಕ್ಕೆ ಒಳಗಾಗದೆ ಭಕ್ತಿ ಮುಖ್ಯವೇ ಹೊರತು ಆಡಂಬರವಲ್ಲ ಎಂದು ತ್ಯಾಗರಾಜರು ಹೊರಬಂದರು ಎಂದು ಹೇಳಿದರು.
ದೇಶ, ವಿದೇಶದಲ್ಲೂ ತ್ಯಾಗರಾಜರ ಆರಾಧನಾ ಪಂಚರತ್ನ ಕೀರ್ತನೆಗಳ ಸಮೂಹ ಗಾಯನಕ್ಕೆ ಸಹಸ್ರಾರು ಜನರು ಸೇರುತ್ತಾರೆ. ಮುಂದಿನ ದಿನಗಳಲ್ಲಿ ತ್ಯಾಗರಾಜ ಆರಾಧನಾ ಕಾರ್ಯಕ್ರಮವನ್ನು ನಗರದಲ್ಲಿ ನೂರಾರು ಕಲಾವಿದರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಹಿರಿಯ ಕಲಾವಿದ ವಿದ್ವಾನ್ ರಾಘವೇಂದ್ರ ಪ್ರಸಾದ್ ಮಾತನಾಡಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಂಗೀತ ಸಂತ ತ್ಯಾಗರಾಜರಿಂದ ಪ್ರೇರಿತರಾಗಿ ಸಂಗೀತಾಭ್ಯಾಸ ಕಲಿತು ಜನಪ್ರಿಯರಾದವರು ಬಹಳಷ್ಟಿದ್ದಾರೆ ಎಂದರು.
ನೂರಾರು ವರುಷಗಳ ಹಿಂದೆ ಮೈಸೂರು ಸಂಸ್ಥಾನದ ತ್ಯಾಗರಾಜ ರಸ್ತೆಯ ಸುತ್ತಮುತ್ತಲಿನ ಬಡಾವಣೆಯ ಇತಿಹಾಸವನ್ನು ನೋಡುವದಾದರೆ, ವಿದ್ವಾಂಸರು, ಅರಮನೆ ಪಂಡಿತರು, ಪಕ್ಕವಾದ್ಯ ಕಲಾವಿದರು ಹೆಚ್ಚಿದ್ದರು. ಅದನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರಗಳು ಇಂತಹ ಮಹನೀಯರ ಜಯಂತಿ, ಸ್ಮರಣೆಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೇವಲ ರಸ್ತೆಗೆ ಹೆಸರಿಟ್ಟು ನಾಮಫಲಕ ಅನಾವರಣ ಮಾಡಿದರೆ ಪ್ರಯೋಜನವೇನು? ತ್ಯಾಗರಾಜರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ರಾವ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕ ಎಂ.ಆರ್.ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ಶಾಸ್ತ್ರಿ, ಹೊಯ್ಸಳ ಕರ್ನಾಟಕದ ನಿರ್ದೇಶಕ ವಿ.ಹರೀಶ್, ಮುಖಂಡರಾದ ವಿಜಯ್ ಕುಮಾರ್, ಪ್ರಶಾಂತ್, ಎಸ್.ಬಿ.ವಾಸುದೇವಮೂರ್ತಿ, ಸುಚೇಂದ್ರ, ಮಿರ್ಲೆ ಫಣೀಶ್, ಚಕ್ರಪಾಣಿ, ಲತಾ ಬಾಲಕೃಷ್ಣ, ನಾಗಶ್ರೀ ಇತರರು ಇದ್ದರು.