

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ತ್ಯಾಗರಾಜ ಹಾಗೂ ಪುರಂದರ ದಾಸರ ಕೊಡುಗೆ ಅಪಾರವಾದುದು ಎಂದು ಎಸ್‌ಬಿಎಂ ನಿವೃತ್ತ ವ್ಯವಸ್ಥಾಪಕ ಎಂ.ವೈ.ಕುಮಾರ್ ಅಭಿಪ್ರಾಯಪಟ್ಟರು.
ಜಯಲಕ್ಷ್ಮೀಪುರಂನ ಮಹಾಜನ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಸ್ವರಾಲಯ ಸಂಗೀತ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತ್ಯಾಗರಾಜ ಹಾಗೂ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಶ್ರೀರಾಮನ ಪ್ರೇರಣೆಯಿಂದ ತ್ಯಾಗರಾಜ ಹಾಗೂ ಪುರಂದರರು ಸಂಗೀತ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಪಂಚರತ್ನ ಕೀರ್ತನೆ ಸೇರಿದಂತೆ ಸಾವಿರಾರು ಕೀರ್ತನೆಗಳನ್ನು ನೀಡಿದ್ದಾರೆ. ದೇಶ-ವಿದೇಶಗಳಲ್ಲಿ ಇವರಿಬ್ಬರ ಆರಾಧನೆ ಹಾಗೂ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನಕ್ಕೆ ಸಹಸ್ರಾರು ಜನರು ಸೇರುತ್ತಾರೆ. ಮುಂದಿನ ದಿನಗಳಲ್ಲಿ ತ್ಯಾಗರಾಜರ ಆರಾಧನೆಯನ್ನು ನಗರದ ತ್ಯಾಗರಾಜ ರಸ್ತೆಯಲ್ಲೇ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಂಗೀತ ಸಂತರಾದ ತ್ಯಾಗರಾಜ ಹಾಗೂ ಪುರಂದರರಿಂದ ಪ್ರೇರಿತರಾಗಿ ಸಂಗೀತಾಭ್ಯಾಸ ಕಲಿತು ಜನಪ್ರಿಯರಾದವರು ಬಹಳಟ್ಟು ಕಲಾವಿದರಿದ್ದಾರೆ. ನೂರಾರು ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ತ್ಯಾಗರಾಜ ರಸ್ತೆಯ ಸುತ್ತಮುತ್ತಲಿನ ಬಡಾವಣೆಯ ಇತಿಹಾಸವನ್ನು ನೋಡುವುದಾದರೆ ವಿದ್ವಾಂಸರು, ಅರಮನೆ ಪಂಡಿತರು, ಪಕ್ಕವಾದ್ಯ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂದು ಸ್ಮರಿಸಿದರು.
ತ್ಯಾಗರಾಜ, ಪುರಂದರ ದಾಸರ ಕುರಿತು ಮಾತನಾಡಿದ ಸ್ವರಾಲಯ ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತಾಮಣಿ, ಸಂಗೀತ ಕ್ಷೇತ್ರದ ದಿಗ್ಗಜರಾದ ತ್ಯಾಗರಾಜರ ಆರಾಧನಾ ಮಹೋತ್ಸವವನ್ನು ಅವರು ಘನರಾಗಗಳಲ್ಲಿ ರಚಿಸಿದ ಪಂಚರತ್ನ ಕೃತಿಗಳನ್ನು ಹಾಡುವ ಮೂಲಕ ಆಚರಿಸುತ್ತೇವೆ. ಈ ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಕುಟ ರತ್ನಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವರಾಲಯ ಸಂಗೀತ ಸಂಸ್ಥೆ ಅಧ್ಯಕ್ಷೆ ವಿದುಷಿ ಡಾ.ಸುಮಾ ಹರಿನಾಥ್, ಸದಸ್ಯರಾದ ರೂಪಾ ನರಸಿಂಹನ್, ಶುಭಾ ಗಣೇಶ್, ವಿಭುದ ರಾಜೇಂದ್ರ, ಲೀಲಾವತಿ ಇತರರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಸ್ಥೆ ಪದಾಧಿಕಾರಿಗಳು, ಸ್ಥಳೀಯ ವಿದ್ವಾಂಸರಿಂದ ಪಿಳ್ಳಾರಿ ಗೀತೆ ಹಾಗೂ ಪಂಚರತ್ನ ಕೃತಿಗಳ ಗಾಯನ ಜರುಗಿತು. ವಯೋಲಿನ್‌ನಲ್ಲಿ ವಿದ್ವಾನ್ ಸಿ.ಚೇತನ್, ಮೃದಂಗದಲ್ಲಿ ವಿದ್ವಾನ್ ವಿ.ಶ್ಯಾಮ್ ಸಹಕರಿಸಿದರು.