

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕು ಕಚೇರಿಯ ಬಳಿ ಪೊಲೀಸ್ ಪೇದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೇ ಕಳ್ಳತನವಾಗಿದೆ.
ಬೈಕ್ ಕಳೆದುಕೊಂಡವರು ಬಾಗೇಪಲ್ಲಿ ಪೊಲೀಸ್ ಕಾನ್ಸಟೇಬಲ್ ಸಂತೋಷ ಕುಮಾರ್. ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರಲು ಅಣ್ಣನ ಮಗನಾದ ನಾಗೇಶ ಹೆಸರಿನಲ್ಲಿರುವ ದ್ವಿಚಕ್ರ ವಾಹನವನ್ನು ಬಳಸುತ್ತಿದ್ದರು. ಇತ್ತೀಚೆಗೆ ಬಾಗೇಪಲ್ಲಿ ತಾಲೂಕು ಕಚೇರಿಯ ಬಳಿ ವಾಹನ ನಿಲ್ಲಿಸಿ, ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾರೆ. ಮತ್ತೆ ಕೆಲಸ ಮುಗಿಸಿಕೊಂಡು ಹೋಗಿ ನೋಡಿದಾಗ ಬೈಕ್ ಇಲ್ಲ.
ತಾಲೂಕು ಕಚೇರಿ ಬಳಿ ಬಿಟ್ಟಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬಾಗೇಪಲ್ಲಿ ಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಾಡಿದರೂ ಇದುವರೆಗೂ ಸಿಕ್ಕಿಲ್ಲ ಎಂದು ಪೊಲೀಸ್ ಪೇದೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸರ್ಕಾರಿ ಕಚೇರಿ, ಸಾರ್ವಜನಿಕ ನಿಲುಗಡೆಯ ಪ್ರದೇಶಗಳಲ್ಲಿ ನಿಲ್ಲಿಸಿರುವ ಬೈಕುಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಪೊಲೀಸರು ಕಾರ್ಯಾಚರಣೆ ಕೈಗೊಂಡು ದ್ವಿಚಕ್ರ ವಾಹನಗಳ ಸಮೇತ ಕಳ್ಳರನ್ನು ಹಿಡಿದರೂ ಸಹ ಕಳವು ಪ್ರಕರಣಗಳು ಮಾತ್ರ ನಿಲ್ಲುತ್ತಿಲ್ಲ. ಇದು ವಾಹನ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.