

ಬೆಂಗಳೂರು: ಕರೊನಾ ಸಾಂಕ್ರಾಮಿಕತೆ, ನೆರೆ ಹೊಡೆತ, ಪಕ್ಷದ ಆಂತರಿಕ ಸರಣಿ ಸವಾಲುಗಳ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ವರ್ಷ ರಾಜ್ಯಭಾರ ಪೂರೈಸಿದ್ದಾರೆ. 2019ರ ಜುಲೈನಲ್ಲಿ ರಾಜ್ಯದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎದುರಾದ ಅತಿವೃಷ್ಟಿ, ಅದಾದ ಬಳಿಕ ಕರೊನಾ ಎರಡು ಅಲೆಗಳು ಸುನಾಮಿ ರೂಪ ಪಡೆದಿದ್ದವು. ಇವುಗಳನ್ನು ದಿಟ್ಟವಾಗಿ ಎದುರಿಸಿ ಜನರಿಗಾಗಿ ಹತ್ತಾರು ಯೋಜನೆಗಳನ್ನು ಕಾರ್ಯಗತ ಮಾಡಿಕೊಂಡು ಸೈ ಎನಿಸಿಕೊಂಡಿದ್ದಾರೆ. ರಾಜ್ಯದುದ್ದಗಲಕ್ಕೂ ದೊಡ್ಡ, ಮಧ್ಯಮ ಹಾಗೂ ಸಣ್ಣ ಮಟ್ಟದ ನೀರಾವರಿ ಯೋಜನೆಗಳಿಗೆ ಹಣ ಸಿಕ್ಕಿದೆ . ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ವಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಆ ಸಮುದಾಯದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಭರವಸೆ ಮೂಡಿಸಿದೆ.
ನಾನು ಯಾವಾಗ ರಾಜೀನಾಮೆ ಕೊಡಬೇಕು ಎಂದು ಸೂಚಿಸುತ್ತಾರೋ ಆಗ ಕೊಡುತ್ತೇನೆ, ಇದುವರೆಗೂ ಯಾವುದೇ ಸಂದೇಶ ನೀಡಿಲ್ಲ. ರಾತ್ರಿಯೊಳಗೆ ಸಂದೇಶ ಬರಬಹುದು ಎಂಬ ವಿಶ್ವಾಸ ಇದೆ. ಸೋಮವಾರ ಕಾರ್ಯಕ್ರಮ ಪೂರ್ವ ನಿಶ್ಚಯವಾಗಿದೆ, ಅದನ್ನು ಮಾಡುತ್ತೇನೆ ಎಂದು ಹೇಳಿದರು. ಈ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಂದ ಸೂಚನೆ ಬರದಿದ್ದರೆ ಸೋಮವಾರ ಮುಂದೇನು ಮಾಡಬೇಕೆಂದು ನಿರ್ಧರಿಸುವೆ. ಇನ್ನೂ ಹದಿನೈದು ವರ್ಷ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಗೌಪ್ಯತೆಗೆ ಆದ್ಯತೆ: ಇಡೀ ಬೆಳವಣಿಗೆಯಲ್ಲಿ ಪಕ್ಷದ ವರಿಷ್ಠರು ಮುಂದಿನ ತೀರ್ವನದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ, ಇಲ್ಲಿನ ಪ್ರತಿಯೊಂದು ಬೆಳವಣಿಗೆ ಬಗ್ಗೆ ವರದಿ ಪಡೆದು ಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೆ. ಒಂದೊಮ್ಮೆ ನಾಯಕತ್ವ ಬದಲಾವಣೆ ನಿಶ್ಚಿತ ಎಂದಾದರೆ ಒಂದಷ್ಟು ಸಹಜ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಸಿ ಅಲ್ಲಿ ತೀರ್ವನವಾಗಬೇಕು, ರಾಜ್ಯದಲ್ಲಿ ಪ್ರಮುಖರ ಅಭಿಪ್ರಾಯ ಆಲಿಸಬೇಕು. ಬಳಿಕ ರಾಜೀನಾಮೆ ಸಲ್ಲಿಕೆಗೆ ಸೂಚನೆ ಕೊಟ್ಟು ನಂತರ ಹೊಸ ನಾಯಕನ ಹೆಸರು ಪ್ರಕಟಿಸಿ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿ ಅಧಿಕೃತವಾಗಿ ಆಯ್ಕೆ ಮಾಡಬೇಕಾಗುತ್ತದೆ.
ಗುಸುಗುಸು ಚರ್ಚೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಸಂಜೆ ಸಭೆ ನಡೆಸಿದ್ದು ಸಾಕಷ್ಟು ಚರ್ಚೆಯಾಗಿತ್ತು. ಜೋಶಿ ಬೆಂಗಳೂರಿಗೆ ಆಗಮಿಸಿ ಭಾನುವಾರ ಅನೌಪಚಾರಿಕ ಸಭೆ ನಡೆಸಿದರು. ಇನ್ನೊಂದೆಡೆ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ತೆರಳಿದ್ದಾರೆ. ಜಗದೀಶ ಶೆಟ್ಟರ್ ಅವರು ಆರ್ಎಸ್ಎಸ್ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಹಾಗೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾಯಕತ್ವ ಬದಲಾವಣೆ ಸಂದೇಶದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಮೀಸಲು ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಅವುಗಳಿಗೆ ಪರಿಹಾರ ನೀಡಿ ತಾತ್ವಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಉನ್ನತಮಟ್ಟದ ಸಮಿತಿ ಮಾಡಿದ್ದಾರೆ. ಇನ್ನು ಹೊಸ ಸರ್ಕಾರ ರಚನೆಯಾದ ಬಳಿಕ ನಡೆದ ಉಪ ಚುನಾವಣೆಗಳಲ್ಲಿ ಬಿಎಸ್ವೈ ಫುಲ್
ಮಾರ್ಕ್ಸ್ ಪಡೆದುಕೊಂಡರು. ಮಸ್ಕಿ ಹೊರತುಪಡಿಸಿ ಉಳಿದೆಲ್ಲ ಕಡೆ ವಿಜಯಾತ್ರೆ ಮುಂದುವರಿಸಿ ಪಕ್ಷದ ನೆಲೆ ಗಟ್ಟಿಗೊಳಿಸಿಕೊಟ್ಟ ಕೀರ್ತಿ ಯಡಿಯೂರಪ್ಪನವರಿಗೇ ಸಲ್ಲುತ್ತದೆ. ಶಿರಾ ವಿಧಾನಸಭಾ ಕ್ಷೇತ್ರದ ಗೆಲುವು, ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಖಾತೆ ತೆರೆಯುವಂತೆ ಮಾಡಿದ್ದೂ ಸಹ ಅಚ್ಚರಿಯೇ. ಕರೊನಾ ಸಾಂಕ್ರಾಮಿಕದ ನಡುವೆ ಅತೀ ಹೆಚ್ಚು ಹೂಡಿಕೆ ತಂದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಲಾಕ್ಡೌನ್, ಮಂಕಾದ ಆರ್ಥಿಕ ಪರಿಸ್ಥಿತಿ ನಡುವೆ ಕರ್ನಾಟಕದ ಬೆಸ್ಟ್ ಪ್ರಾಕ್ಟಿಸಸ್ಗೆ ಕೇಂದ್ರವೇ ತಲೆದೂಗಿತು. ಬೆಳೆ ಸಮೀಕ್ಷೆ ನಡೆಸುವ ಮೊಬೈಲ್ ಆಪ್ಬಗ್ಗೆ ಪ್ರಧಾನಿ ಕಚೇರಿಯೇ ಖುದ್ದಾಗಿ ವಿವರಣೆ ಪಡೆದು ಕೊಂಡಿತು. ಅದೇ ರೀತಿ ಶೈಕ್ಷಣಿಕವಾಗಿ ಭೀಮ ಹೆಜ್ಜೆಯನ್ನಿರಿಸಿದ ಸಮಗ್ರ ಕಲಿಕಾ ನಿರ್ವಹಣೆ ವ್ಯವಸ್ಥೆ, ಸರ್ಕಾರಿ ಕಾಲೇಜು ತರಗತಿಗಳು ಸ್ಮಾರ್ಟ್ ಕ್ಲಾಸ್ ಆಗಿ ರೂಪಾಂತರ ಆಗುತ್ತಿದೆ.