ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

Crime Logo
Published on

ಬೆಂಗಳೂರು: ಗಾರ್ಮೆಂಟ್ಸ್‌ನಲ್ಲಿದ್ದ ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಪರಪ್ಪನ ಅಗ್ರಹಾರದಲ್ಲಿ ಶನಿವಾರ ನಡೆದಿದೆ.


ಪರಪ್ಪನ ಅಗ್ರಹಾರದ ನಾಗಮುನೇಶ್ವರ ಲೇಔಟ್ ನಿವಾಸಿ ಕಮ್ಮರ್ ಆನಂದ್(೪೪) ಮತ್ತು ಎಲೆಕ್ಟ್ರಾನಿಕ್ ಸಿಟಿ ೨ನೇ ಹಂತದ ಬಸವನಗರ ನಿವಾಸಿ ಟಿ.ಆರ್.ಶಶಿಕುಮಾರ್(೫೧) ಮೃತ ಕಾರ್ಮಿಕರು.


ಡಿ.೨೩ರಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಹೊಸೂರು ಮುಖ್ಯರಸ್ತೆಯ ಬೆರೆಟೇನ ಅಗ್ರಹಾರದಲ್ಲಿರುವ ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಶಶಿಕುಮಾರ್ ಪುತ್ರ ಎಸ್.ಶ್ರೀಧರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಗಾರ್ಮೆಂಟ್ಸ್ ಕಂಪನಿಯ ಪ್ರೊಡೆಕ್ಷನ್ ಜಿಎಂ ನಂದೀಶ್‌ಗೌಡ, ಮೇಂಟೆನೆನ್ಸ್ ಡಿಜಿಎಂ ರಾಜೇಶ್ ಮಾರಾರ್, ಎಕ್ಸಿಕ್ಯೂಟಿವ್ ಇನ್‌ಚಾರ್ಜ್ ಶ್ರೀನಿವಾಸ್, ಇನ್‌ಚಾರ್ಜ್ ಜೇಮ್ಸ್‌ರಾಜು, ಎಚ್‌ಆರ್ ಚಂದ್ರಮೋಹನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕಮ್ಮರ್ ಆನಂದ್ ಮತ್ತು ಟಿ.ಆರ್.ಶಶಿಕುಮಾರ್ ಶಾಹಿ ಎಕ್ಸ್‌ಪೋರ್ಟ್ಸ್ ಗಾರ್ಮೆಂಟ್ಸ್‌ನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ಆಪರೇಟರ್‌ಗಳಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಡಿ.೨೩ರಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಈ ಇಬ್ಬರು ಕಾರ್ಮಿಕರು ಎಸ್‌ಟಿಪಿಯಿಂದ ಸಂಸ್ಕರಣೆಯಾಗಿ ಬರುವ ನೀರನ್ನು ಶೇಖರಿಸುವ ಸಂಪ್‌ನೊಳಗೆ ಇಳಿದು ಸ್ವಚ್ಛತೆಯಲ್ಲಿ ತೊಡಗಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರೂ ಅಸ್ವಸ್ಥರಾಗಿದ್ದಾರೆ. ಇದನ್ನು ಗಮನಿಸಿರುವ ಗಾರ್ಮೆಂಟ್ಸ್‌ನ ಸಿಬ್ಬಂದಿ ಕೂಡಲೇ ಇಬ್ಬರನ್ನೂ ಸಂಪ್‌ನಿಂದ ಮೇಲಕ್ಕೆ ಎತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿರುವ ವೈದ್ಯರು ಕಾರ್ಮಿಕರಿಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಸ್ಥಳ ಪರಿಶೀಲಿಸಿದ್ದಾರೆ.


ಆಡಳಿತ ಮಂಡಳಿ ನಿರ್ಲಕ್ಷ್ಯ!
ಘಟನೆ ಸಂಬಂಧ ಮೃತ ಕಾರ್ಮಿಕ ಶಶಿಕುಮಾರ್ ಪುತ್ರ ಶ್ರೀಧರ್ ನೀಡಿದ್ದಾರೆ. ಕಾರ್ಮಿಕರಿಬ್ಬರ ಸಾವಿಗೆ ಗಾರ್ಮೆಂಟ್ಸ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ. ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಸಂಪ್ ಒಳಗಡೆ ಇಳಿಸಿದ ಪರಿಣಾಮ ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net