ಕೋವಿಡ್ ಆಸ್ಪತ್ರೆಗೆ ಇಬ್ಬರು ಮಹಿಳೆಯರು ಶಿಫ್ಟ್

12-7-2020 ALRp02
Published on

ಆಲೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಶಾ ಬಡಾವಣೆ ಹಾಗೂ ಸಾಣೇನಹಳ್ಳಿ ಗ್ರಾಮದ ಇಬ್ಬರು ಮಹಿಳೆಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಅವರನ್ನು ಶನಿವಾರ ಹಾಸನದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮಹಿಳೆ ಹದಿನೈದು ದಿನದ ಹಿಂದೆ ಬೆಂಗಳೂರಿನಿಂದ ಬಂದು ಆಶಾ ಬಡಾವಣೆಯಲ್ಲಿ ನೆಲೆಸಿದ್ದರು. ಅಲ್ಲದೆ ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಜತೆಗೆ ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗೆ ಒಳಪಟ್ಟಿದ್ದರು. ಶನಿವಾರ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಮುನ್ನಚ್ಚರಿಕೆ ಕ್ರಮವಾಗಿ ಮಹಿಳೆ ವಾಸವಿದ್ದ ಮನೆಗೆ ಔಷಧ ಸಿಂಪಡಣೆ ಮಾಡಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಕುಂದುರ್ ಹೋಬಳಿಯ ಸಾಣೇನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಶುಕ್ರವಾರ ಹೃದ್ರೋಗ ಚಿಕಿತ್ಸೆಗೆಂದು ಹಾಸನದ ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಸೋಂಕು ತಗುಲಿದೆ ಎನ್ನಲಾಗಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕವಳಿಕೆರೆ ಗ್ರಾಮದ ವ್ಯಕ್ತಿಯೊಬ್ಬರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ ನಿಯಮ ಉಲ್ಲಂಘನೆ ಮಾಡದಂತೆ ಗ್ರಾಮಲೆಕ್ಕಾಧಿಕಾರಿ ಎಚ್ಚರಿಕೆ ನೀಡಿದ್ದರೂ ನಿಯಮವನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಅವರ ವಿರುದ್ಧ ತಾಲೂಕು ಆಡಳಿತ ಆಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ ಎಂದು ತಹಸೀಲ್ದಾರ್ ಶಿರೀನ್ ತಾಜ್ ತಿಳಿಸಿದ್ದಾರೆ.

ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಆರೋಗ್ಯಾಧಿಕಾರಿ ಮಂಜುನಾಥ್ ಹಾಗೂ ಕೋವಿಡ್ ಜಾಗೃತಿ ಸಮಿತಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net