ಅಪಘಾತದಲ್ಲಿ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರು ಸಾವು

mdl Accident
ಬನ್ನಿಗೋಳ ಗ್ರಾಮದ ಹೊರವಲಯದಲ್ಲಿ ನಡೆದ ಅಪಘಾತದಲ್ಲಿ ಟ್ರಾೃಕ್ಟರ್ ಟ್ರಾಲಿ ಪಲ್ಟಿಯಾಗಿದ್ದು, ಮೃತ ಶ್ರೀದೇವಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ರಸ್ತೆ ಅಪಘಾತದಲ್ಲಿ ಸಾರಿಗೆ ಬಸ್ ಮುಂಭಾಗ ಜಖಂಗೊಂಡಿರುವುದು.
Published on

ಮುದಗಲ್: ಸಮೀಪದ ಬನ್ನಿಗೋಳ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ಸಾರಿಗೆ ಬಸ್ ಹಾಗೂ ಕೂಲಿ ಕಾರ್ಮಿಕರಿದ್ದ ಟ್ರಾೃಕ್ಟರ್ ನಡುವೆ ಡಿಕ್ಕಿ ಸಂಭವಿಸಿ ನಾಲ್ಕು ತಿಂಗಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 18 ಜನರು ಗಾಯಗೊಂಡಿದ್ದಾರೆ.

ಟ್ರಾೃಕ್ಟರ್‌ನಲ್ಲಿದ್ದ ಪಿಕಳಿಹಾಳ ಗ್ರಾಮದ ಶ್ರೀದೇವಿ ಸಿದ್ದಪ್ಪ (19) ಹಾಗೂ ಜಾಂತಾಪುರದ ಗರ್ಭಿಣಿ ಅಮರಮ್ಮ ನಿಂಗಪ್ಪ (20) ಮೃತರು. ಒಟ್ಟು 24 ಜನರ ಪೈಕಿ ತೀವ್ರ ಗಾಯಗೊಂಡ ಬನ್ನಿಗೋಳ ಗ್ರಾಮದ ಕೂಲಿ ಕಾರ್ಮಿಕರಾದ ಮೌನೇಶ, ಶಾಂತಮ್ಮ, ಶರಣಪ್ಪ, ಪಾರ್ವತೆಮ್ಮ, ಶೇಖಪ್ಪ, ಶಿವಪ್ಪ, ನಿಂಗಪ್ಪ, ಮೌನೇಶ, ಭಂಡಾರೆಪ್ಪ ಸೇರಿ ಇತರರನ್ನು ಮುದಗಲ್ ಹಾಗೂ ಲಿಂಗಸಗೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಂ, ಮುದಗಲ್ ಠಾಣೆ ಪಿಎಸ್‌ಐ ವೆಂಕಟೇಶ ಮಾಡಗೇರಿ, ಅಪರಾಧ ವಿಭಾಗದ ಪಿಎಸ್‌ಐ ಛತ್ರಪ್ಪ ರಾಠೋಡ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಿದ್ದೇನು?: ಕಡಲೆ ಕೀಳಲೆಂದು ಕೂಲಿ ಕೆಲಸಕ್ಕಾಗಿ ಜಮೀನಿಗೆ ಟ್ರಾೃಕ್ಟರ್‌ನಲ್ಲಿ ಕೂಲಿಕಾರರನ್ನು ಕರೆದೊಯ್ಯುವಾಗ ಅಂಕಲಿಮಠ ದಿಂದ ಲಿಂಗಸಗೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ನಡುವೆ ಅಪಘಾತವಾಗಿದೆ.

ಡಿಕ್ಕಿ ರಭಸಕ್ಕೆ ಟ್ರಾೃಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಬಸ್ ಮುಂಭಾಗವಷ್ಟೇ ನಜ್ಜುಗುಜ್ಜಾಗಿದೆ. ಬೆಳಗ್ಗೆ ಘಟನೆ ನಡೆದಿದ್ದರಿಂದ ತುರ್ತು ಸೇವೆಗಳು ಸಕಾಲಕ್ಕೆ ಸಿಗಲಿಲ್ಲ. ಸ್ಥಳೀಯರು ಖಾಸಗಿ ವಾಹನ, ಬೈಕ್‌ಗಳ ಮೂಲಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಶ್ರೀದೇವಿ ಸ್ಥಳದಲ್ಲೇ ಸಾವಿಗೀಡಾದರೆ, ಗರ್ಭಿಣಿ ಅಮರಮ್ಮ ಹೊಟ್ಟೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸುನೀಗಿದರು.

ತವರಿಗೆ ಬಂದವರು ಮಸಣ ಸೇರಿದರು

ಅಂತರ್ ಅಮಾವಾಸ್ಯೆ ಕಾರಣ ಶ್ರೀದೇವಿ ತವರೂರಾದ ಬನ್ನಿಗೋಳ ಹಾಗೂ ನಾಲ್ಕು ತಿಂಗಳ ಗರ್ಭಿಣಿ ಅಮರಮ್ಮ ಅವರು ಜಾಂತಾಪುರಕ್ಕೆ ಬಂದಿದ್ದರು. ಶ್ರೀದೇವಿಗೆ ಎಂಟು ತಿಂಗಳ ಹಿಂದೆ ಹಾಗೂ ಅಮ್ಮರಮ್ಮಗೆ ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆದರೆ, ಗುರುವಾರ ಕೂಲಿ ಕೆಲಸಕ್ಕೆಂದು ಟ್ರಾೃಕ್ಟರ್‌ನಲ್ಲಿ ತೆರಳುತ್ತಿರುವಾಗ ಸಂಭವಿಸಿದ ಅಪಘಾತದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನು ಕಂಡ ಎರಡೂ ಗ್ರಾಮಸ್ಥರು ಮಮ್ಮಲ ಮರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net