ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದಲ್ಲಿ ಶನಿವಾರ ದನ ಮೇಯಿಸಲು ತೆರಳಿದ್ದ ಇಬ್ಬರು ಮಹಿಳೆಯರು ಖಾಸಗಿ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಗ್ರಾಮದ ಶಕುಂತಲಮ್ಮ (39), ಗಂಗಮ್ಮ (36) ಮೃತರು.
ಮಧ್ಯಾಹ್ನವಾದರೂ ಮಹಿಳೆಯರು ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ. ಬಳಿಕ ಗ್ರಾಮಸ್ಥರಿಗೆ ಮಹಿಳೆಯರ ಮೊಬೈಲ್ ಫೋನ್ ಮತ್ತು ಚಪ್ಪಲಿಗಳು ಹೊಂಡದ ತಟದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯ ಹುಟ್ಟಿದ್ದು, ಸ್ಥಳಿಯರು ತಕ್ಷಣವೇ ಶೋಧ ಕಾರ್ಯ ಕೈಗೊಂಡು ಕೆಲವೇ ಹೊತ್ತಿನಲ್ಲಿ ಇಬ್ಬರ ಶವಗಳು ಹೊಂಡದಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಕೊರಟಗೆರೆ ಠಾಣೆಯ ಪಿಎಸ್ಐ ತೀರ್ಥೇಶ್ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.