ಕಬಿನಿ ಡ್ಯಾಂ ಬಳಿ ಎರಡು ಕಾಡಾನೆ ಪ್ರತ್ಯಕ್ಷ

IMG-20251020-WA0013
ಕಬಿನಿ ಹಿನ್ನೀರಿನ ಬಳಿ ಕಾಣಿಸಿಕೊಂಡ ಕಾಡಾನೆಗಳು.
Published on

ಎಚ್.ಡಿ.ಕೋಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಎನ್.ಬೇಗೂರು ಅರಣ್ಯದಿಂದ ಆಹಾರ ಅರಸಿ ಬಂದ ಎರಡು ಗಂಡಾನೆಗಳು ಕಬಿನಿ ಹಿನ್ನೀರಿನ ಮೂಲಕ ಕಬಿನಿ ಜಲಾಶಯದ ಬಳಿ ಸೋಮವಾರ ಕಾಣಿಸಿಕೊಂಡು ಆತಂಕವುಂಟು ಮಾಡಿದ್ದವು.

ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.

ಸೋಮವಾರ ಬೆಳಗ್ಗೆ ಕಬಿನಿ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಈಜಿಕೊಂಡು ಬರುತ್ತಿದ್ದನ್ನು ಜಲಾಶಯದ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ನೋಡಿ ತಕ್ಷಣ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳು ಕಬಿನಿ ಜಲಾಶಯದ ಅಣೆಕಟ್ಟು ಭದ್ರತಾ ಪೊಲೀಸ್ ಅಧಿಕಾರಿಗಳು ಸೇರಿ ಆನೆಗಳನ್ನು ಓಡಿಸಲು ಸತತ ಪ್ರಯತ್ನ ಮಾಡಿದರು. ಆದರೆ ಆನೆಗಳು ಕಬಿನಿ ಜಲಾಶಯದ ಮುಖ್ಯ ದ್ವಾರದ ಬಳಿ ಬರಲು ಪ್ರಯತ್ನಿಸಿದವು. ಸ್ಥಳದಲ್ಲಿ ನೆರೆದಿದ್ದ ಜನ ಕೂಗಿಕೊಂಡು ಚೀರಾಟ ಮಾಡಿದಾಗ ಕಬಿನಿ ಮಾದರಿ ಮನೆ ಹಿಂಭಾಗ ಇರುವ ನರ್ಸರಿ ಒಳಗೆ ಬೀಡು ಬಿಟ್ಟಿದ್ದವು.

ಆನೆಗಳು ಎನ್.ಬೇಗೂರು ಅರಣ್ಯ ವಲಯ ವ್ಯಾಪ್ತಿಯಿಂದ ಬಂದಿರುವುದಾಗಿ ತಿಳಿದು ಬಂದಿದ್ದು, ಆ ಭಾಗದಲ್ಲಿ ರೈತರುಗಳು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಆನೆಗಳನ್ನು ಅರಣ್ಯಕ್ಕೆ ಅಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎನ್. ಬೇಗೂರು, ಎಚ್.ಡಿ.ಕೋಟೆ ಉಪವಲಯ ಅರಣ್ಯ, ಆನೆ ಕಾರ್ಯಪಡೆ ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net