ಎರಡು ಗ್ರಾಮಗಳು, ಐದು ಬಡಾವಣೆಗಳು ಸೀಲ್‌ಡೌನ್

JUNE 28, HNP., PH.1.
Published on

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಎರಡು ಗ್ರಾಮಗಳು ಮತ್ತು ಪಟ್ಟಣದ ಐದು ಬಡಾವಣೆಗಳ ರಸ್ತೆಯನ್ನು ನಿರ್ಬಂಧಿತ ವಲಯವೆಂದು ಘೋಷಿಸಿ, ಭಾನುವಾರ ಸೀಲ್‌ಡೌನ್ ಮಾಡಲಾಯಿತು.

ತಾಲೂಕಿನಲ್ಲಿ ಶನಿವಾರ ನಾಲ್ಕು ಕರೊನಾ ಸೋಂಕು ದೃಢಪಟ್ಟಿದ್ದರಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮತ್ತು ಡಯಾಲಿಸಿಸ್‌ಗೆ ದಾಖಲಾಗಿದ್ದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಕಾರಣದಿಂದ ವಾರ್ಡ್ ನಂ. 21, ಡಯಾಲಿಸಿಸ್ ಕೇಂದ್ರ, ಕಾಲುವೆ ಕೇರಿ ಬೀದಿ ಮತ್ತು ಮೂರು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.

ಜನರ ಮನದಲ್ಲಿ ಆತಂಕ ಮೂಡಿಸಿದ್ದ ಈ ಘಟನೆ ಮಾಸುವ ಮುನ್ನವೇ ಭಾನುವಾರ ಬೆಳಗ್ಗೆ ತಾಲೂಕಿನಲ್ಲಿ 10 ಜನರಲ್ಲಿ ಸೋಂಕು ದೃಢಪಟ್ಟಿರುವುದು ಗಾಬರಿಗೊಳಿಸಿದೆ.
ಪಟ್ಟಣದ ಹೇಮಾವತಿ ನಗರದ ನಿವಾಸಿಗಳಾದ ಪೌರ ಕಾರ್ಮಿಕರು ನಾಲ್ಕು ಹಾಗೂ ಡಾ.ಅಂಬೇಡ್ಕರ್ ನಗರ, ನರಸಿಂಹನಾಯಕ ನಗರ, ಹೇಮಾವತಿ ನಗರ, ಸಿದ್ಧಾರ್ಥನಗರ, ವೆಂಕಟೇಶ್ವರ ಬ್ಲಾಕ್, ಹಳ್ಳಿಮೈಸೂರು ಹೋಬಳಿಯ ಕಬ್ಬೂರು ಹಾಗೂ ಗುಲಗಂಜಿಹಳ್ಳಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ತಾಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿರ್ಬಂಧಿತ ವಲಯವೆಂದು ಘೋಷಿಸಿ, ಸೀಲ್‌ಡೌನ್ ಮಾಡಿಸಿದೆ. ಜತೆಯಲ್ಲಿ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಸ್ವಯಂ ಪರೀಕ್ಷೆಗೆ ಒಳಪಡಲು ಕೋರಿದೆ ಮತ್ತು ಗುರುತಿಸಲು ತನಿಖೆಯನ್ನು ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net