ಬಳ್ಳಾರಿ : ಜರ್ಮನಿಯ ಲಿಂಡೌನಲ್ಲಿ ಜೂ. 29ರಿಂದ ಜುಲೈ 4ರವರೆಗೆ ಜರುಗಲಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಲಿಂಡೌ ನೊಬೆಲ್ ಪುರಸ್ಕೃತರ ಸಭೆಗೆ ಇಲ್ಲಿನ ವಿಎಸ್‌ಕೆ ವಿವಿಯ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಗೌತಮಿ ಪಾಟೀಲ್, ಡಾ.ನಸೀಮ್ ಕೌಸರ್ ಆಯ್ಕೆಯಾಗಿದ್ದಾರೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಡಿಎಸ್‌ಟಿ ದೇಶವ್ಯಾಪಿ ಆಯ್ಕೆ ಮಾಡಿರುವ ಒಟ್ಟು 29 ಯುವ ವಿಜ್ಞಾನಿಗಳ ಪೈಕಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ವಿಶೇಷ. ಪ್ರತಿವರ್ಷ ಜರುಗುವ ಲಿಂಡೌ ಜಾಗತಿಕ ಸಭೆಯಲ್ಲಿ ವಿಶ್ವದ ಆಯ್ದ 600 ಯುವ ವಿಜ್ಞಾನಿಗಳನ್ನು ಆಹ್ವಾನಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ದಿಗ್ಗಜರೊಂದಿಗೆ ಚರ್ಚಾಕೂಟ, ದುಂಡು ಮೇಜಿನ ಪರಿಷತ್ತುಗಳನ್ನು ನಡೆಸುತ್ತದೆ. 74ನೇ ಆವೃತ್ತಿಯ ಸಮ್ಮೇಳನವು ಈ ಬಾರಿ ರಸಾಯನಶಾಸ್ತ್ರ ವಿಷಯಕ್ಕೆ ಮೀಸಲಿಟ್ಟಿದ್ದು, ಆಯ್ಕೆಗೊಂಡಿರುವ ವಿದ್ಯಾರ್ಥಿಗಳ ಪ್ರವಾಸ ಹಾಗೂ ಇನ್ನಿತರ ಖರ್ಚು, ವೆಚ್ಚಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ನಿಭಾಯಿಸಲಿದೆ.